ತಾಲೂಕಿನ ಪಚ್ಚೆದೊಡ್ಡಿ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದರು
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಪಚ್ಚೆದೊಡ್ಡಿ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದರು.ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇಲ್ಲದಿರುವುದು ಹಾಗೂ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಿಸುವಂತೆ ಮನವಿ ಮಾಡಿದ್ದರು. ಅದರಂತೆ ಎರಡು ಸಮಸ್ಯೆ ಬಗೆಹರಿಸಿದ್ದೇನೆ. ಇದೀಗ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿರುವುರಿಂದ ಗ್ರಾಮಕ್ಕೆ ಬಂದು ಗ್ರಾಮಸ್ಥರ ಕುಂದುಕೊರತೆ ಆಲಿಸಿದ್ದೇನೆ ಎಂದರು.
ಗ್ರಾಮದಲ್ಲಿರುವ ಪ್ರತಿ ಸಮಸ್ಯೆಯನ್ನು ಪ್ರತ್ಯೇಕವಾಗಿ ಮನವಿ ಪತ್ರದ ಮೂಲಕ ನೀಡುವಂತೆ ಗ್ರಾಮಸ್ಥರಿಗೆ ತಿಳಿಸಿದ್ದೇನೆ. ಪ್ರತಿ ತಿಂಗಳು ನಡೆಯುವ ಸಾರ್ವಜನಿಕ ಅರ್ಜಿ ಸಮಿತಿಯ ಸಭೆಯ ಮುಂದಿಟ್ಟು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಸಚಿವರ ಜೊತೆ ಚರ್ಚೆ ನಡೆಸಿ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಆರೋಗ್ಯ ಇಲಾಖೆಯ ಮುಖ್ಯ ಆಯುಕ್ತರ ಜೊತೆ ಮಾತನಾಡಿ ಪ್ರತಿಯೊಂದು ವಾರಕ್ಕೊಮ್ಮೆ ಮೊಬೈಲ್ ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆ ಕೊಡಿಸಲಾಗುವುದು. ಸಾರ್ವಜನಿಕ ಅರ್ಜಿ ಸಮಿತಿಯ ಕಮಿಟಿ ಎಲ್ಲಾ ಸದಸ್ಯರನ್ನು ಗ್ರಾಮಕ್ಕೆ ಕರೆತಂದು ಸಮಸ್ಯೆ ಬಗೆಹರಿಸಲು ಚರ್ಚೆ ನಡೆಸಲಾಗುದು ಎಂದರು.
ಮುಖಂಡ ಮುನಿರಾಜು ಮಾತನಾಡಿ, ನಮ್ಮ ಗ್ರಾಮಕ್ಕೆ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ. ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಅತಿ ಕಡಿಮೆ ಬೆಲೆಗಳಿಗೆ ದಲ್ಲಾಳಿಗಳಿಗೆ ನೀಡುವಂತಾಗಿದೆ, ಮೊಬೈಲ್ ನೆಟ್‌ವರ್ಕ್ ಇಲ್ಲದೆ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ವಾಹನದ ವ್ಯವಸ್ಥೆ ಸಿಗುತ್ತಿಲ್ಲ. ಇದರಿಂದ ಗರ್ಭಿಣಿಯರು ಅನಾರೋಗ್ಯ ಪೀಡಿತರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಬರುತ್ತಿಲ್ಲ, ಈ ನಿಟ್ಟಿನಲ್ಲಿ ತಾವು ಈ ಹಿಂದೆ ಭರವಸೆ ನೀಡಿದಂತೆ ಎರಡು ಸಮಸ್ಯೆಗಳನ್ನು ಬಗೆಹರಿಸುತ್ತೀರಾ ಅದೇ ರೀತಿ ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಸುಮಾರು 15ಕ್ಕೂ ಹೆಚ್ಚು ಶಾಲೆಗಳು ಈ ವ್ಯಾಪ್ತಿಯಲ್ಲಿ ಇರುವುದರಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನಾನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸುವಂತೆ ಜಿಪಂ ಸಿಇಒಗೆ ವರದಿ ನೀಡಲಾಗಿದೆ ಎಂದು ತಿಳಿಸಿದರು.ಬಿಆರ್ ಸಿ ವೆಂಕಟೇಶ್, ಡಿ ಆರ್ ಎಫ್ ಒ ನಂದೀಶ್, ಗ್ರಾಮಸ್ಥರಾದ ಪಚ್ಚಮ್ಮ ಶಿವಕುಮಾರ್, ನಾರಾಯಣಗೌಡ ಗೋವಿಂದೇಗೌಡ, ಕೃಷ್ಣೇಗೌಡ, ಮನ್ನಾದೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.