ವೈದ್ಯರ ಕೊರತೆ, ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಜಿಲ್ಲಾಧಿಕಾರಿ ಮಿಶ್ರಾ

| Published : Jan 31 2024, 02:19 AM IST

ವೈದ್ಯರ ಕೊರತೆ, ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಜಿಲ್ಲಾಧಿಕಾರಿ ಮಿಶ್ರಾ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿಯೇ ವೈದ್ಯರ ಕೊರತೆ ಇದೆ. ಹಂತ- ಹಂತವಾಗಿ ಎಲ್ಲ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಲಾಗುವುದು. ಕುಡತಿನಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ತಿಳಿಸಿದರು.

ಕುರುಗೋಡು: ಜಿಲ್ಲೆಯ ಪ್ರತಿ ತಾಲೂಕಿನ ಎರಡು ಹೋಬಳಿ ಕೇಂದ್ರಗಳಲ್ಲಿ ಪ್ರತಿ ತಿಂಗಳು ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

ಸಮೀಪದ ಕುಡತಿನಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿಯೇ ವೈದ್ಯರ ಕೊರತೆ ಇದೆ. ಹಂತ- ಹಂತವಾಗಿ ಎಲ್ಲ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಲಾಗುವುದು. ಕುಡತಿನಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುವುದು. ₹15 ಕೋಟಿ ಬಿಡುಗಡೆಯಾಗಿದೆ. ಕುಡತಿನಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಕೆರೆ ತುಂಬಿಸಿ ಜನರಿಗೆ ನೀರು ಪೂರೈಸಲಾಗುವುದು ಎಂದರು.

ಪಟ್ಟಣದ 5 ಮತ್ತು 6ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು,15 ದಿನಕ್ಕೊಮ್ಮೆ ನೀರು ಒದಗಿಸುತ್ತಿದ್ದಾರೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತಿದ್ದು, ಕೂಡಲೇ ಮಿನಿ ನೀರಿನ ಟ್ಯಾಂಕರ್ ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಮೆಣಿಸಿನಕಾಯಿ ಬೆಳೆಗಳ ಆರೈಕೆಗೆ ಗೋದಾಮು ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದಲ್ಲಿ ಭೂಮಿ ಕಳೆದುಕೊಂಡ ಭೂ ಸಂತ್ರಸ್ತರು ಸುಮಾರು ದಿನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭರವಸೆಯಲ್ಲಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಕೂಡಲೇ ನಮಗೆ ನ್ಯಾಯ ಒದಗಿಸಿ ಎಂದು ಭೂ ಸಂತ್ರಸ್ತರು ಜಿಲ್ಲಾಧಿಕಾರಿ ಮುಂದೆ ಅಂಗೈ ಚಾಚಿ ಬೇಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈಗಾಗಲೇ ಸಿಎಂ ಸಿದ್ದರಾಮಯ್ಯ, ಕೈಗಾರಿಕೆ ಸಚಿವರು, ಉಸ್ತುವಾರಿ ಸಚಿವರು ಸೇರಿ ವಿವಿಧ ಸಚಿವರ ಹತ್ತಿರ ಮಾತನಾಡಿದ್ದೇವೆ. ಶೀಘ್ರದಲ್ಲಿ ನಿಮಗೆ ನ್ಯಾಯ ದೊರಕಲಿದೆ ಎಂದರು.

ಕುಡತಿನಿ ಪಟ್ಟಣದಲ್ಲಿ ವಿವಿಧ ಕೈಗಾರಿಕೆಗಳು ಇದ್ದು, ಅದರಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಆದ್ದರಿಂದ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಶಾಸಕ ಈ ತುಕಾರಾಂ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಅವರನ್ನು ಒತ್ತಾಯಿಸಿದರು.

ಕುಡತಿನಿ ಭಾಗದಲ್ಲಿ ಕಾರ್ಖಾನೆಗಳಿದ್ದು, ಇದರಿಂದ ವಾಯುಮಾಲಿನ್ಯ ಹೆಚ್ಚಾಗಿದ್ದು, ಕೂಡಲೇ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕುರುಗೋಡು ರಸ್ತೆಯಲ್ಲಿಇರುವ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಿವೇಶನಗಳ ಹಂಚಿಕೆಗೆ ಕುಡಿಯುವ ನೀರು, ರಸ್ತೆ ಸೇರಿ ಸೌಲಭ್ಯ ಕಲ್ಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್, ಸಹಾಯಕ ಆಯುಕ್ತ ಹೇಮಂತ್, ಬಳ್ಳಾರಿ ತಹಸೀಲ್ದಾರ್ ಗುರುರಾಜ ಛಲವಾದಿ, ತಹಸೀಲ್ದಾರ್ ರಾಘವೇಂದ್ರರಾವ್ ಜಿಲ್ಲಾ ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಘವೇಂದ್ರ, ಜಿಪಂ ಉಪ ಕಾರ್ಯದರ್ಶಿ ಶ್ರೀಗಿರಿಜಾ ಶಂಕರ ಇತರರು ಇದ್ದರು.