ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಲು ಕ್ರಮ

| Published : Feb 22 2024, 01:49 AM IST

ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಲು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿ ಜಿಲ್ಲೆಗಳ ಭಾಗಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲನೆ ಮಾಡುವ ಸಂಬಂಧ ಬುಧವಾರ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ತಮಿಳುನಾಡು ರಾಜ್ಯದ ಈರೋಡ್ ಜಿಲ್ಲಾ ಕಲೆಕ್ಟರ್ ಎಸ್. ರಾಜಗೋಪಾಲ್ ಅವರ ಸಮ್ಮುಖದಲ್ಲಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿ ಜಿಲ್ಲೆಗಳ ಭಾಗಗಳಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲನೆ ಮಾಡುವ ಸಂಬಂಧ ಬುಧವಾರ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ತಮಿಳುನಾಡು ರಾಜ್ಯದ ಈರೋಡ್ ಜಿಲ್ಲಾ ಕಲೆಕ್ಟರ್ ಎಸ್. ರಾಜಗೋಪಾಲ್ ಅವರ ಸಮ್ಮುಖದಲ್ಲಿ ಸಭೆ ನಡೆಯಿತು.ಚಾಮರಾಜನಗರ ತಾಲೂಕಿನ ಸುವರ್ಣಾವತಿಯ ಪ್ರವಾಸಿ ಮಂದಿರದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪಾಲಿಸಬೇಕಿರುವ ಕಟ್ಟುನಿಟ್ಟಿನ ಕ್ರಮಗಳ ಕುರಿತು ನಡೆದ ಅಂತಾರಾಜ್ಯ ಗಡಿ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಜಂಟಿ ಸಮನ್ವಯ ಸಮಿತಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಅಕ್ರಮ ಮದ್ಯ, ದಾಖಲೆ ಇಲ್ಲದ ಹಣ, ಆಮಿಷವೊಡ್ಡುವ ಉಡುಗೊರೆ, ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ಇಡಬೇಕು. ಅಕ್ರಮಗಳು ಕಂಡು ಬಂದ ಕೂಡಲೇ ಜಪ್ತಿ ಮಾಡಿ ನಿಯಮಾನುಸಾರ ಕ್ರಮ ಜರುಗಿಸಬೇಕೆಂದು ಸೂಚಿಸಲಾಯಿತು. ಗಡಿಭಾಗಗಳಲ್ಲಿ ಶಾಶ್ವತ ಚೆಕ್‌ಪೋಸ್ಟ್‌ಗಳೊಂದಿಗೆ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳು ಸಕ್ರಿಯವಾಗಿ ಕಾರ್ಯ ನಿರ್ವಹಣೆಯಾಗಬೇಕು. ಗಡಿ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆಯಾಗಬೇಕು. ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕಣ್ಗಾವಲು ಇರಬೇಕು. ಪರಸ್ಪರ ಉಭಯ ಜಿಲ್ಲೆಗಳ ಅಧಿಕಾರಿಗಳ ಸಮನ್ವಯ ಸಹಕಾರದಿಂದ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವುದರ ಕುರಿತು ವಿವರವಾಗಿ ಚರ್ಚಿಸಲಾಯಿತು. ಅರಣ್ಯದಂಚಿನ ಗ್ರಾಮಗಳ ಮೂಲಕ ಸಂಚರಿಸುವ ವಾಹನಗಳ ಮೇಲೂ ನಿಗಾ ಇರಿಸಬೇಕು. ಎಲ್ಲಿಯೇ ಆಗಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರವಾಗಿ ಪರಿಶೀಲಿಸಬೇಕು. ಉಭಯ ಜಿಲ್ಲೆಗಳಲ್ಲಿಯೂ ಕಂಟ್ರೋಲ್ ರೂಂಗೆ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕು. ಸಂಪರ್ಕ ವ್ಯವಸ್ಥೆ ಅಲಭ್ಯವಾಗುವ ಕಡೆ ಹಾಟ್‌ಲೈನ್ ಸಂಪರ್ಕ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಗಡಿಭಾಗದ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿಯೆ ಗಡಿ ಗ್ರಾಮಗಳ ಅಂಗಡಿಗಳಲ್ಲಿ ವ್ಯಾಪಕವಾಗಿ ತಪಾಸಣಾ ಕಾರ್ಯವನ್ನು ಅಬಕಾರಿ ಅಧಿಕಾರಿಗಳು ಚುರುಕುಗೊಳಿಸಬೇಕಾಗುತ್ತದೆ. ಮಾದಕ ವಸ್ತುಗಳ ಕಾರ್ಯಚಟುವಟಿಕೆಗಳ ಮೇಲೂ ಹೆಚ್ಚಿನ ನಿಗಾ ಇಡಬೇಕು. ಯಾವುದೇ ಅಕ್ರಮಗಳು ನಡೆಯದಂತೆ ಪಾರದರ್ಶಕವಾಗಿ ಚುನಾವಣೆ ನಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಅತ್ಯಂತ ಬಿಗಿಯಾಗಿ ಜಾರಿಗೊಳಿಸಬೇಕು ಎಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಈರೋಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಜವಾಹರ್, ಚಾಮರಾಜನಗರ ಜಿಲ್ಲೆಯ ಹಿರಿಯ ಅರಣ್ಯ ಅಧಿಕಾರಿ ದೀಪಾ ಕಂಟ್ರಾಕ್ಟರ್, ಡಾ. ಸಂತೋಷ್, ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಉಪನಿರ್ದೇಶಕ ಕೆ. ಸುಧಾಕರ್, ತಾಲೂಕುಗಳ ತಹಸೀಲ್ದಾರ ಬಸವರಾಜು, ರಮೇಶ್ ಬಾಬು, ಮಂಜುಳಾ, ವಿರೂಪಾಕ್ಷ, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್, ಯೋಗಾನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಸೇರಿದಂತೆ ಉಭಯ ಜಿಲ್ಲೆಗಳ ಅಬಕಾರಿ, ಪೊಲೀಸ್, ಕಂದಾಯ, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.