ತಿಪಟೂರು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್‌

| Published : Feb 21 2025, 12:47 AM IST

ತಿಪಟೂರು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಆಸ್ಪತ್ರೆಯ ಒತ್ತಡವನ್ನು ನೀಗಿಸಲು ಹೆಚ್ಚು ಸಿಬ್ಬಂದಿ ಹಾಗೂ ಕೆಲವು ವೈದ್ಯಕೀಯ ಸಲಕರಣೆಗಳು ಆಸ್ಪತ್ರೆಗೆ ಅಗತ್ಯವಿದ್ದು ಅದನ್ನೆಲ್ಲಾ ಚರ್ಚೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ಉತ್ತಮ ಸೌಲಭ್ಯದಿಂದ ಕೂಡಿದ್ದು, ಇಲ್ಲಿನ ಸೇವೆ ಉತ್ತಮವಾಗಿರುವುದರಿಂದಲೇ ಸುತ್ತಲಿನ ತಾಲೂಕುಗಳಿಂದ ಜನರು ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಿದೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಪಿಡಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಆಸ್ಪತ್ರೆಯ ಒತ್ತಡವನ್ನು ನೀಗಿಸಲು ಹೆಚ್ಚು ಸಿಬ್ಬಂದಿ ಹಾಗೂ ಕೆಲವು ವೈದ್ಯಕೀಯ ಸಲಕರಣೆಗಳು ಆಸ್ಪತ್ರೆಗೆ ಅಗತ್ಯವಿದ್ದು ಅದನ್ನೆಲ್ಲಾ ಚರ್ಚೆ ಮಾಡಲಾಗಿದೆ. ಮುಂದೆ ಅದನ್ನು ಯಾವ ರೀತಿ ಮಾಡಬೇಕೆಂದು ಶಾಸಕರಿಗೆ ತಿಳಿಸಿದ್ದೇನೆ. ಮುಂದಿನ ವಾರ ಅವರು ಬೆಂಗಳೂರಿಗೆ ಬಂದರೆ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಕೂಡಲೇ ಆ ಕೆಲಸಗಳನ್ನು ಮಾಡಲಾಗುವುದು. ನಂತರ ಮುಂದಿನ ದಿನಗಳಲ್ಲಿ ಬಜೆಟ್‌ನಲ್ಲಿ ಯಾವುದನ್ನು ಅಪ್ರೂವ್ ಮಾಡಿಸಬೇಕು ಅದನ್ನು ಮುಖ್ಯಮಂತ್ರಿಗಳ ಚರ್ಚಿಸಿ ಅನುದಾನ ಬಿಡುಗಡೆಗೆ ಕೋರಲಾಗುವುದು. ಈ ಆಸ್ಪತ್ರೆಯನ್ನು ಇನ್ನೂ ಉತ್ತಮವಾಗಿ ನಿರ್ವಹಣೆ ಮಾಡಬಹುದಾಗಿದ್ದು ಅದಕ್ಕೆ ನನ್ನ ಕಡೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು, ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲದಕ್ಕೂ ಶಾಸಕರು ಬೇಡಿಕೆ ಇಟ್ಟಿದ್ದಾರೆ. ತಿಪಟೂರು ತಾಲೂಕಿಗೆ ಈ ಎಲ್ಲ ಅರ್ಹತೆಗಳು ಇದೆ. ಆದರೆ ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ಈ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ವೈದ್ಯರು ಹಾಗೂ ಸಿಬ್ಬಂದಿಗಳ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಸೀನಿಯಾರಿಟಿ ಹಾಗೂ ಅವರ ಅರ್ಹತೆ ಮೇರೆಗೆ ಯಾರ ಶಿಫಾರಸ್ಸು ಇಲ್ಲದೆಯೇ ಆಗುವಂತೆ ಮಾಡಲಾಗಿದೆ ಎಂದು ತಿಳಿಸಿದರು. ಸ್ಟಾಫ್ ನರ್ಸ್‌ಗಳ ಕಣ್ಣೀರು: ಸಾರ್ವಜನಿಕ ಆಸ್ಪತ್ರೆಯ ತಾಯಿ ಮಗು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್‌ಗಳು ಆರೋಗ್ಯ ಸಚಿವರಿಗೆ ಬೇಡಿಕೆ ಸಲ್ಲಿಸಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ನಾವು ಆಗಿನಿಂದಲೂ ಕೇವಲ 10ರಿಂದ 15 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆ. ಜೀವನ ನಿರ್ವಹಣೆ ಆಗುತ್ತಿಲ್ಲ. ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ. ಸಂಬಳವೂ ಹೆಚ್ಚಾಗಿಲ್ಲ ಎಂದು ಕಣ್ಣೀರಿಟ್ಟರು. ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಆಶ್ವಾಸನೆ ನೀಡಿದರು.ಶಾಸಕ ಕೆ.ಷಡಕ್ಷರಿ, ತಾ.ಪಂ. ಇಓ ಸುದರ್ಶನ್, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ಡಿಎಚ್‌ಒ ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿ ರಾಧಿಕಾ, ಮುಖ್ಯ ವೈದ್ಯಾಧಿಕಾರಿ ಶಿವಕುಮಾರ್, ಡಾ.ರಕ್ಷಿತ್, ಡಾ.ರವಿಕುಮಾರ್ ಸೇರಿದಂತೆ ಎಲ್ಲ ವೈದ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶಿವಕುಮಾರ್ ಸಚಿವರಿಗೆ ಮನವಿ ಸಲ್ಲಿಸಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದಕ್ಕೆ ತಕ್ಕಂತೆ ತಜ್ಞ ವೈದ್ಯರು, ಸಿಬ್ಬಂದಿ, ಟೆಕ್ನೀಷಿಯನ್‌ಗಳು, ಡಿ-ಗ್ರೂಪ್ ನೌಕರರ ಕೊರತೆ ಇದೆ. ಆದ್ದರಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿ ದೊರೆಯುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ನೂತನ ಯಂತ್ರಗಳು, ಸಲಕರಣೆಗಳ ಪಟ್ಟಿಯನ್ನು ಸಚಿವರಿಗೆ ನೀಡಿದರು. ಬಾಕ್ಸ್.....

ಶಾಸಕ ಕೆ. ಷಡಕ್ಷರಿ ಸಚಿವ ಸ್ಥಾನಕ್ಕೆ ಸಮರ್ಥರು

ಅನುಭವಿಗಳಿಗೆ ಸಚಿವ ಸ್ಥಾನ ನೀಡಿದರೆ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ. ಇಲ್ಲಿನ ಶಾಸಕ ಕೆ.ಷಡಕ್ಷರಿ ನಮ್ಮ ಪಕ್ಷದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಅನುಭವಿಗಳಾಗಿದ್ದಾರೆ. ಯಾವುದೇ ಸಚಿವ ಸ್ಥಾನಮಾನ ನೀಡಿದರೂ ನಿಭಾಯಿಸುವ ಸಾಮರ್ಥ್ಯವಿದೆ. ಪಕ್ಷದ ಹಾಗೂ ವರಿಷ್ಠರೂ ಅವರ ಸಾಮರ್ಥ್ಯದಂತೆ ಸಚಿವ ಸ್ಥಾನ ನೀಡಿದರೆ ನಾನೂ ಖುಷಿ ಪಡುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.ಫೋಟೋ 20-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾಯಿ ಮಕ್ಕಳ ಆರೋಗ್ಯ ವಿಚಾರಿಸಿದರು.