ಜಾತಿ ಸರ್ಟಿಫಿಕೆಟ್‌ ಸುಳ್ಳೆಂದು ಸಾಬೀತಾದ್ರೆ ಕ್ರಮ: ಸಿಎಂ

| Published : Aug 26 2025, 01:03 AM IST

ಜಾತಿ ಸರ್ಟಿಫಿಕೆಟ್‌ ಸುಳ್ಳೆಂದು ಸಾಬೀತಾದ್ರೆ ಕ್ರಮ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಕೆ ಮತ್ತು ಅದರಿಂದ ಸರ್ಕಾರಿ ಸೌಲಭ್ಯ ಪಡೆದಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾದರೆ ಅಂಥವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಕೆ ಮತ್ತು ಅದರಿಂದ ಸರ್ಕಾರಿ ಸೌಲಭ್ಯ ಪಡೆದಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾದರೆ ಅಂಥವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಎಸ್ಸಿ/ಎಸ್ಟಿ ಸಮುದಾಯದ ಮೇಲಿನ ದೌರ್ಜನ್ಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಈ ವೇಳೆ ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳ ಕುರಿತು ನ್ಯಾಯಾಲಯಗಳಲ್ಲಿ ತೀರ್ಪು ಬಂದರೂ ಜಾರಿಗೆ ತರದೆ ಬಾಕಿ ಉಳಿಸಿರುವ ಪ್ರಕರಣಗಳ ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳಿಗೆ ಸಂಬಂಧಿಸಿ 170 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ತೀರ್ಪು ಬಂದಿದೆ. ಆದರೂ, ಸುಳ್ಳು ಜಾತಿ ಪ್ರಮಾಣಪತ್ರ ನೀಡಿದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡಿಲ್ಲ. ಅಂಥವರು ಸರ್ಕಾರಿ ಸೌಲಭ್ಯ ಪಡೆದಿರುವುದು ತಿಳಿದುಬಂದರೆ ಕೂಡಲೇ ಅದನ್ನು ಹಿಂಪಡೆಯಬೇಕು. ಅದಕ್ಕೆ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಿದ್ದು, ಆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.

ಅದೇ ರೀತಿ ಎಸ್ಸಿ/ಎಸ್ಟಿ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ 60 ದಿನಗಳೊಳಗಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕು. ಕಳೆದ 6 ತಿಂಗಳಲ್ಲಿ ಶೇ. 84ರಷ್ಟು ಪ್ರಕರಣಗಳಲ್ಲಿ ಮಾತ್ರ ನಿಗದಿತ ಸಮಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಅದು ಶೇ.100ರಷ್ಟಾಗಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಪೊಲೀಸರು ಯಾವುದೇ ನೆಪ ಹೇಳಬಾರದು ಎಂದರು.

ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ 11 ವಿಶೇಷ ನ್ಯಾಯಾಲಯದ ಸ್ಥಾಪಿಸಲಾಗಿದೆ. ಅದರಿಂದ ತ್ವರಿತ ನ್ಯಾಯ ಒದಗಿಸಬೇಕು. ಅಲ್ಲದೆ, ಸದ್ಯ ನ್ಯಾಯಾಲಯಗಳಲ್ಲಿ 56 ಪ್ರಕರಣಗಳಲ್ಲಿ ತಡೆಯಾಜ್ಞೆಯಿದ್ದು, ಅದನ್ನು ತೆರವುಗೊಳಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ.10ರಷ್ಟಿದ್ದು, ಅದನ್ನು ಹೆಚ್ಚಿಸಬೇಕು. ಒಂದು ವೇಳೆ ಪೊಲೀಸರೊಂದಿಗೆ ಆರೋಪಿತರು ಶಾಮೀಲಾದರೆ ಅಂತಹ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಪ್ರತಿದೂರು ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸತ್ಯಾಂಶ ಇದ್ದರೆ ಮಾತ್ರ ಎಫ್‌ಐಆರ್‌ ದಾಖಲಿಸಬೇಕು. ದೌರ್ಜನ್ಯ ಪ್ರಕರಣದಲ್ಲಿ ಅಂಗವಿಕಲತೆಯುಂಟಾದರೆ ವೈದ್ಯಕೀಯ ಪರಿಹಾರ ಮೊತ್ತ ಹೆಚ್ಚಿಸಲು ಪರಿಶೀಲಿಸಲಾಗುವುದು ಎಂದರು.

ಬ್ಯಾಕ್‌ಲಾಗ್‌ ಭರ್ತಿಗೆ ಅಡ್ಡಿಪಡಿಸುವುದು ಸಲ್ಲ:

ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ವಿಷಯದಲ್ಲಿ ಯಾವುದೇ ರಾಜಿಯಾಗಬಾರದು. ಸರ್ಕಾರ ದಲಿತರ ಪರವಾಗಿದ್ದು, ದಲಿತರಿಗೆ ನ್ಯಾಯ ಒದಗಿಸಲು ಅಡ್ಡಗಾಲು ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ದೇವದಾಸಿಯರ ಸಮೀಕ್ಷೆ ಆರಂಭಿಸಿದ್ದು, ಪೂರ್ಣಗೊಂಡ ಬಳಿಕ ಅವರಿಗೆ ಪುನರ್‌ವಸತಿ ವಿಶೇಷ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಸಚಿವರಾದ ಎಚ್‌.ಕೆ. ಪಾಟೀಲ್‌, ಡಾ. ಎಚ್‌.ಸಿ.ಮಹದೇವಪ್ಪ, ಕೆ.ಎಚ್‌. ಮುನಿಯಪ್ಪ, ಆರ್‌.ಬಿ. ತಿಮ್ಮಾಪೂರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಇತರರಿದ್ದರು.

-ಬಾಕ್ಸ್-

ವಿಪಕ್ಷ ನಾಯಕರ ಬೇಸರ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಭೆಯಲ್ಲಿ ಕಲಬುರಗಿಯಲ್ಲಿ ತಮ್ಮ ವಿರುದ್ಧ ಆಗಿರುವ ದೌರ್ಜನ್ಯದ ಕುರಿತು ಸಭೆಯಲ್ಲಿ ಪ್ರತಸ್ತಾಪಿಸಿದರು. ಕಲಬುರಗಿಯಲ್ಲಿ ತಮ್ಮನ್ನು ಕೂಡಿಹಾಕಿ, ಫೋಟೋ ಮತ್ತು ಕಾರಿಗೆ ಮಸಿ ಬಳಿದ ಫೋಟೋಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಕುರಿತು ಪ್ರಕರಣ ದಾಖಲಿಸುವಂತೆ ಡಿಜಿ-ಐಜಿಗೆ ಸೂಚನೆ ನೀಡಿದರು.

-ಬಾಕ್ಸ್‌-ಎಸ್ಸಿ/ಎಸ್ಟಿ ಪ್ರಕರಣಗಳ ಅಂಕಿ ಅಂಶ

- ಕಳೆದ ಮೂರು ವರ್ಷಗಳಲ್ಲಿ 6,635 ಪ್ರಕರಣಗಳು ದಾಖಲು

- 3 ವರ್ಷಗಳಲ್ಲಿ 4,912 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ

- 36 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ, ತನಿಖಾ ಹಂತದಲ್ಲಿವೆ 679 ಕೇಸ್‌