ನರಗುಂದ: ಪ್ರಸಕ್ತ ವರ್ಷ ತಾಲೂಕಿನ ರೈತರು ಮುಂಗಾರು ಬಿತ್ತನೆ ಮಾಡುತ್ತಿದ್ದಾರೆ. ಆದ್ದರಿಂದ ರಸಗೊಬ್ಬರ ಮಾರಾಟಗಾರರು ಬೀಜ ಮತ್ತು ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದೆಂದು ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಎಸ್.ಎಫ್. ಬೆಳವಟಿಗೆ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಲಯದಲ್ಲಿ ತಾಲೂಕಿನ ಖಾಸಗಿ ಹಾಗೂ ಸಹಕಾರಿ ಸಂಘಗಳ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರವನ್ನು ಮಾರಾಟ ಮಾಡಬಾರದು. ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದರು.ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ರೈತರ ಎಫ್ಐಡಿಯನ್ನು ಪರಿಶೀಲಿಸಿ ನಿಗದಿತ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರವನ್ನು ಕೆ ಕಿಸಾನ್ ತಂತ್ರಾಂಶ ಬಳಸಿಕೊಂಡು ಪಿಒಎಸ್ ಮಷಿನ್ ಮೂಲಕ ರಸಗೊಬ್ಬರ ವಿತರಿಸಬೇಕು. ಇದರಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ರೈತರು ಅನವಶ್ಯಕವಾಗಿ ಹೆಚ್ಚುವರಿ ರಸಗೊಬ್ಬರ ಬಳಸದಂತೆ ನಿಯಂತ್ರಿಸಿ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುವುದು ಎಂದರು.

ಎಲ್ಲ ರಸಗೊಬ್ಬರ ಮಾರಾಟಗಾರರು ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ಈ ಕುರಿತಂತೆ ಮನವರಿಕೆ ಮಾಡಬೇಕು ಎಂದರು.

ಯೂರಿಯಾ ಹಾಗೂ ಡಿಎಪಿಗಳ ಬದಲಾಗಿ ನ್ಯಾನೋ ರಸಗೊಬ್ಬರಗಳನ್ನು ಬಳಸುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ತಿಳಿಸಿದರು. ಎಲ್ಲ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ಮಳಿಗೆಯಲ್ಲಿರುವ ರಸಗೊಬ್ಬರಗಳ ಮಾಹಿತಿ ಮತ್ತು ಅವುಗಳ ದರಪಟ್ಟಿಯನ್ನು ಪ್ರದರ್ಶಿಸಬೇಕು ಎಂದರು.

ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ರೈತ ಸಮುದಾಯ ಯಾವುದೇ ಕಾರಣಕ್ಕೂ ರೈತರಿಗೆ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಅತಿ ಅವಶ್ಯಕ. ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲು ಮಾರಾಟಗಾರರಗೆ ಸೂಚಿಸಿದರು.


ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡುವ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ತಾಲೂಕಿನ ರೈತರಿಗೆ ಮಾತ್ರ ರಸಗೊಬ್ಬರವನ್ನು ವಿತರಣೆ ಮಾಡಬೇಕು ಮತ್ತು ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೃಷಿ ಇಲಾಖೆ ಹಾಗೂ ಎಲ್ಲಾ ಕೃಷಿ ಪರಿಕರ ಮಾರಾಟಗಾರರ ನಡುವೆ ಪರಸ್ಪರ ಸಹಕಾರ ಅತಿ ಮುಖ್ಯ ಎಂದರು.ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಗುಡಿಸಾಗರ ಮಾತನಾಡಿ, ನಾವು ಇಲಾಖೆ ಮಾರ್ಗದರ್ಶನ ಮತ್ತು ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಪ್ರವೀಣ ಪಾಟೀಲ, ಶಿವಾನಂದ ಸಾಠೆ, ಶರತ್ ಪಾಟೀಲ್ ಮತ್ತು ಕೃಷಿ ಪರಿಕರ ಮಾರಾಟಗಾರರು ಇದ್ದರು.