ಸಾರಾಂಶ
ಕನ್ನಡ ನಾಮಫಲಕ ಜಾಗೃತಿ ಜಾಥಾಕ್ಕೆ ಚಾಲನೆ । ಮಸಿ ಬಳಿಯುವ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಹಾಸನಸರ್ಕಾರದ ಆದೇಶದಂತೆ ಕರ್ನಾಟಕದಲ್ಲಿ ಶೇಕಡ ೬೦ ರಷ್ಟು ಕನ್ನಡ ಬಳಕೆಯ ನಾಮಪಲಕ ಇರಬೇಕು. ಆದರೆ ಅನೇಕರು ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ವಾಹನದ ಮೂಲಕ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಫೆ.೨೮ ರ ಒಳಗೆ ಮಾತೃ ಭಾಷೆ ಬಳಕೆ ಮಾಡದಿದ್ದರೆ ನಮ್ಮ ಸಂಘಟನೆಯಿಂದ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಕರವೇ ಜಿಲ್ಲಾ ಉಪಾಧ್ಯಕ್ಷ ಸೀತಾರಾಮು ಎಚ್ಚರಿಕೆ ನೀಡಿದರು.
ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ನಗರದ ರೈಲ್ವೆ ನಿಲ್ದಾಣದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶೇಕಡ ೬೦ ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿ ಮಾಡಬೇಕು ಎನ್ನುವ ಬೃಹತ್ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮವಾಗಬೇಕು, ಕನ್ನಡಿಗನಿಗೆ ಮೊದಲ ಆದ್ಯತೆ ಕೊಡಬೇಕು. ಯಾವುದೇ ಅನ್ಯ ಭಾಷೆಗಳು ಕರ್ನಾಟಕಕ್ಕೆ ಬಂದರೂ ಸಹ ಇಲ್ಲಿ ಕನ್ನಡದ ಭಾಷೆಯಲ್ಲಿ ವ್ಯವಹರಿಸಬೇಕು. ನಮ್ಮ ತಾಯಿಯನ್ನು ಗೌರವಿದ ಹಾಗೆಯೇ ತಾಯಿ ಭುವನೇಶ್ವರಿ ಕನ್ನಡ ಭಾಷೆಯನ್ನು ಗೌರವಿಸಬೇಕು ಎಂದು ಹೇಳಿದರು.ಈ ಹೋರಾಟಕ್ಕೆ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡು ಒಳ್ಳೆ ನಿರ್ಧಾರಕ್ಕೆ ಬಂದಿದೆ. ರಾಜ್ಯದಲ್ಲಿ ಇರುವ ಅಂಗಡಿ, ಮಾಲ್ ಸೇರಿದಂತೆ ಎಲ್ಲಾ ಕಡೆ ಶೇಕಡ ನೂರಕ್ಕೆ ಶೇಕಡ ೬೦ ರಷ್ಟು ಕನ್ನಡ ನಾಮಫಲಕಗಳಿರಬೇಕು ಎಂಬುದನ್ನು ಘೋಷಣೆ ಮಾಡಿದೆ. ಈಗಾಗಲೇ ಕರ್ನಾಟಕ ಸುಗ್ರೀವಾಜ್ಞೆ ಮಾಡಲಾಗಿತ್ತು. ವಿಧಾನಸೌಧದಲ್ಲೂ ಕೂಡ ಕನ್ನಡ ಭಾಷೆ ಕುರಿತು ಶೇಕಡ ೬೦ ರಷ್ಟು ಅಳವಡಿಕೆಗೆ ಮಂಡನೆ ಮಾಡಿದೆ. ಕರ್ನಾಟಕ ರಕ್ಷಣಾ ವೇದಿಕೆ ಹಾಸನ ಜಿಲ್ಲಾ ಘಟಕವತಿಯಿಂದ ಈ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೀತಂ ರಾಜ್ ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ಭಾಷೆ ವಿಚಾರದಲ್ಲಿ ಏನಾದರೂ ಧಕ್ಕೆಯಾದಾಗ ಕರವೇ ಸಂಘಟನೆ ಮುಂಚೂಣಿಯಲ್ಲಿ ನಿಂತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡಿದೆ. ರಾಜ್ಯದ ಯಾವ ಭಾಗದಲ್ಲೇ ಆಗಿರಲಿ ಕಡ್ಡಾಯವಾಗಿ ಶೇಕಡ ೬೦ ರಷ್ಟು ನಾಮಫಲಕದಲ್ಲಿ ಕನ್ನಡ ಬಳಕೆ ಇರಬೇಕು ಎಂದು ಆದೇಶವಿದ್ದರೂ ಕೂಡ ಅನೇಕರು ಅನುಸರಿಸುತ್ತಿಲ್ಲ. ಆಂಗ್ಲ ಪದವನ್ನೇ ಬಳಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿಂದೆ ಕನ್ನಡ ಭಾಷೆ ಬಳಕೆ ಮಾಡುವಂತೆ ಪ್ರತಿ ಅಂಗಡಿ ಮುಂಗಟ್ಟು ಬಳಿ ಹೋಗಿ ಗುಲಾಬಿ ನೀಡುವ ಮೂಲಕ ಮನವಿ ಮಾಡಿಕೊಂಡಿದ್ದು, ಇದುವರೆಗೂ ಇಂಗ್ಲೀಷ್ ಪದವನ್ನು ಬದಲಾಯಿಸಿರುವುದಿಲ್ಲ. ಈ ರ್‍ಯಾಲಿ ಮೂಲಕ ಮನವಿ ಮಾಡಲಾಗುತ್ತಿದ್ದು, ಫೆ.೨೭ರ ಒಳಗೆ ಕನ್ನಡ ನಾಮಫಲಕ ಹಾಕುವಂತೆ ಸರ್ಕಾರವೇ ಗಡುವು ಕೊಟ್ಟಿದೆ. ಫೆ.೨೮ ಪ್ರತಿ ಕಡೆಯೂ ಶೇಕಡ ೬೦ ರಷ್ಟು ಕನ್ನಡ ಬಳಕೆ ಇರಲೇಬೇಕೆಂದು ಸೂಚನೆ ನೀಡಿದೆ. ಏನಾದರೂ ನಮ್ಮ ಭಾಷೆ ಬಳಕೆ ಮಾಡದಿದ್ದರೇ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಂದು ಹೋರಾಟದ ಮೂಲಕ ಇಂಗ್ಲೀಷ್ ನಾಮಫಲಕಕ್ಕೆ ಮಸಿ ಬಳಿಯಲಾಗುವುದು. ಈಗಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳು, ನಗರಸಭೆ ಆಯುಕ್ತರು ಕೂಡಲೇ ಗಮನ ಹರಿಸಿ ಯಾರ್‍ಯಾರು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಅವರ ವ್ಯವಹಾರಕ್ಕೆ ನೀಡಲಾಗಿರುವ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ, ನಗರ ಅಧ್ಯಕ್ಷ ಶಿವಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ಅಭಿಗೌಡ, ತೋಫಿಕ್, ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಸಮೀರ್ ಅಹಮದ್ ಇದ್ದರು.ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಎಂದು ಜನಜಾಗೃತಿ ಮೂಡಿಸಲು ಕರವೇ ಕಾರ್ಯಕರ್ತರು ಬುಧವಾರ ಹಾಸನ ರೈಲ್ವೆ ನಿಲ್ದಾಣದ ಬಳಿ ವಾಹನ ಮೂಲಕ ಜಾಗೃತಿ ಜಾಥಾ ಆರಂಭಿಸಿದರು.