ಸಾಲ, ಬಡ್ಡಿ ವಸೂಲಿಗೆ ದೌರ್ಜನ್ಯ ನಡೆಸಿದ್ರೆ ಕ್ರಮ: ಡಿಸಿ

| Published : Aug 21 2025, 01:00 AM IST

ಸಾಲ, ಬಡ್ಡಿ ವಸೂಲಿಗೆ ದೌರ್ಜನ್ಯ ನಡೆಸಿದ್ರೆ ಕ್ರಮ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈಕ್ರೋ ಫೈನಾನ್ಸ್, ಎಂಎಫ್‌ಐ, ಎನ್‌ಬಿಎಫ್‌ಸಿಗಳ ಅಧಿಕಾರಿಗಳು, ಪಾನ್‌ ಬ್ರೋಕರ್ಸ್‌, ಲೇವಾದೇವಿದಾರರು ಸಾಲ, ಕಂತು, ಬಡ್ಡಿ ವಸೂಲಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವರ್ತಿಸಿದರೆ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

- ಮೈಕ್ರೋ ಫೈನಾನ್ಸ್, ಎಂಎಫ್‌ಐ, ಎನ್‌ಬಿಎಫ್‌ಸಿಗಳ ಅಧಿಕಾರಿಗಳು, ಪಾನ್‌ ಬ್ರೋಕರ್ಸ್‌, ಲೇವಾದೇವಿದಾರರ ಸಭೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮೈಕ್ರೋ ಫೈನಾನ್ಸ್, ಎಂಎಫ್‌ಐ, ಎನ್‌ಬಿಎಫ್‌ಸಿಗಳ ಅಧಿಕಾರಿಗಳು, ಪಾನ್‌ ಬ್ರೋಕರ್ಸ್‌, ಲೇವಾದೇವಿದಾರರು ಸಾಲ, ಕಂತು, ಬಡ್ಡಿ ವಸೂಲಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವರ್ತಿಸಿದರೆ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಮೈಕ್ರೋ ಫೈನಾನ್ಸ್, ಎಂಎಫ್‌ಐ, ಎನ್‌ಬಿಎಫ್‌ಸಿಗಳ ಅಧಿಕಾರಿಗಳು, ಪಾನ್‌ ಬ್ರೋಕರ್ಸ್‌, ಲೇವಾದೇವಿದಾರರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಕ್ರೋ ಫೈನಾನ್ಸ್, ನಾನ್ ಬ್ಯಾಂಕಿಂಗ್ ಫೈನಾನ್ಸ್‌ ಇನ್‌ಸ್ಟಿಟ್ಯೂಷನ್, ಪಾನ್ ಬ್ರೋಕರ್ಸ್, ಲೇವಾದೇವಿದಾರರು ಡಿಸಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಈ ಹಿಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರೂ ಇದುವರೆಗೂ ಯಾರೂ ನೋಂದಣಿ ಮಾಡಿಸಿಲ್ಲ ಎಂದರು.

ನಮ್ಮ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು, ಅರ್ಜಿಗಳನ್ನು ಕೊಡಲೆಂದೇ ಓರ್ವ ಅಧಿಕಾರಿಗೆ ನೇಮಿಸಲಾಗಿದೆ. ನೀವು ಕಚೇರಿಯಲ್ಲಿ ಅರ್ಜಿ ಪಡೆದು, ನೋಂದಣಿ ಮಾಡಿಸಬೇಕು. ರಿಜಿಸ್ಟ್ರೇಷನ್ ಮಾಡಿಸದಿದ್ದರೆ ನಮ್ಮ ಜಿಲ್ಲೆಯಲ್ಲಿ ನೀವು ವ್ಯವಹಾರ ಮಾಡಲು ಅವಕಾಶ ಇಲ್ಲ. ಈ ಸಭೆಗೆ ಗೈರಾದವರ ಬಗ್ಗೆ ಆರ್‌ಬಿಐ ಬೆಂಗಳೂರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಎಫ್‌ಡಿ, ಬೆಂಗಳೂರು, ಆರ್‌ಸಿ ಬೆಂಗಳೂರು, ಎಸ್‌ಎಲ್‌ಬಿಸಿ ಬೆಂಗಳೂರು ಹಾಗೂ ಸಹಕಾರ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ವರದಿ ನೀಡುವಂತೆ ಸಹಕಾರ ಸಂಘಗಳ ಉಪ ನಿಬಂಧಕ ಮಧು ಶ್ರೀನಿವಾಸ್‌ ಅವರಿಗೆ ಸೂಚಿಸಿದರು.

ಬೈಕ್‌ ಜಪ್ತಿ ಅಧಿಕಾರ ಕೊಟ್ಟೋರ್ಯಾರು?:

ನೋಂದಣಿ ಪ್ರಾಧಿಕಾರ ಜಿಲ್ಲಾಧಿಕಾರಿಯಾಗಿದ್ದು, ಸಂಬಂಧಿಸಿದ ದಾಖಲೆ ಒದಗಿಸಿ, ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಇಲ್ಲದಿರುವ ಯಾವುದೇ ಮನಿ ಲ್ಯಾಂಡರ್ಸ್‌, ಮೈಕ್ರೋ ಫೈನಾನ್ಸ್‌ ಸಂಸ್ಥೆಯವರು, ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಯವರು ಸಾಲ ಕೊಡುವಂತಿಲ್ಲ. ಅಲ್ಲದೇ, ಹೊನ್ನಾಳಿಯಲ್ಲಿ ದಂಪತಿ ದಾರಿಯಲ್ಲಿ ಹೋಗುವಾಗ ಅಡ್ಡ ಹಾಕಿ ಬೈಕ್ ಜಪ್ತಿ ಮಾಡಿದ್ದೀರಿ. ಪ್ರಕರಣ ದಾಖಲಾಗಿದ್ದು, ವಾಹನ ಸೀಜ್ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಅಧಿಕಾರ ಇದೆಯೆ? ಅಕ್ರಮ ಲೇವಾದೇವಿ ವ್ಯವಹಾರ, ಬಡ್ಡಿ, ಮೀಟರ್ ಬಡ್ಡಿ ದಂಧೆಯವರ ಮೇಲೆ ದಾಳಿ ಮಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಡಿಸಿ ಆದೇಶಿಸಿದರು.

ಎಎಸ್ಪಿಗಳಾದ ಪರಮೇಶ್ವರ ಹೆಗಡೆ, ಸ್ಯಾಮ್ ವರ್ಗೀಸ್‌, ಡಿವೈಎಸ್ಪಿಗಳಾದ ಬಿ.ಎಸ್.ಬಸವರಾಜ, ಬಿ.ಶರಣ ಬಸವೇಶ್ವರ, ಸಿಇಎನ್ ಡಿವೈಎಸ್ಪಿ ನಾಗಪ್ಪ ಬಂಕಾಳಿ, ಸಹಕಾರ ಸಂಘಗಳ ಉಪ ನಿಬಂಧಕ ಮಧು ಶ್ರೀನಿವಾಸ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಡುದಯ್ಯ ಹಿರೇಮಠ, ಸಿಪಿಐ ಲಕ್ಷ್ಮಣ ನಾಯ್ಕ, ವೃತ್ತ ನಿರೀಕ್ಷಕರು, ಪಿಎಸ್ಐ, ಎಂಎಫ್‌ಐ, ಎನ್‌ಬಿಎಫ್‌ಸಿ ಅಧಿಕಾರಿ, ಸಿಬ್ಬಂದಿ, ಪಾನ್ ಬ್ರೋಕರ್ಸ್, ಲೇವಾದೇವಿದಾರರು ಇದ್ದರು.

- - -

(ಬಾಕ್ಸ್‌) * ಸಾಲ ನೀಡುವಾಗ ಸೆಕ್ಯುರಿಟಿ ತೆಗೆದುಕೊಳ್ಳಬಾರದುಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಫೆ.12ರಂದು ರಾಜ್ಯ ಸರ್ಕಾರ ಜಾರಿಗೆ ತಂದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ-2025ರ ಕಾಯ್ದೆ ವ್ಯಾಪ್ತಿಗೆ ನೀವು ಒಳಪಡುತ್ತೀರಿ ಎಂದಿದ್ದೆವು. ಈ ಕಾಯ್ದೆಯಡಿ ಯಾರೆಲ್ಲಾ ಏನೇನು ಮಾಡಬೇಕೆಂಬುದನ್ನೂ ತಿಳಿಸಿದ್ದೆವು. ಆದರೂ, ಕೆಲವರು ಈ ಕಾನೂನಡಿ ಬರುವುದಿಲ್ಲ ಎಂದಿದ್ದೀರಿ. ಕಾಯ್ದೆ ಸೆಕ್ಷನ್‌ 02 ನಿಯಮ (ಇ) ಪ್ರಕಾರ ಲೇವಾದೇವಿದಾರ ಎಂಬುದಕ್ಕೆ ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡುವ ಏಜೆನ್ಸಿ ಅಥವಾ ಸಂಸ್ಥೆಗಳನ್ನೂ ಒಳಗೊಳ್ಳುತ್ತದೆ ಎಂದರು. ಸಾರ್ವಜನಿಕರಿಂದ ದೂರುಗಳು ಬಂದರೆ ಅಥವಾ ಸಂಸ್ಥೆ ಮೇಲೆ ಪ್ರಕರಣ ದಾಖಲಾಗಿದ್ದರೆ ಅಂತಹವರ ಲೈಸೆನ್ಸ್‌ಗಳನ್ನು ರದ್ದುಪಡಿಸುವ ಅಧಿಕಾರ ಜಿಲ್ಲಾಡಳಿತಕ್ಕೆ ಇದೆ. ಸಾರ್ವಜನಿಕರಿಂದ ದೂರು ಬಂದು, ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಕಾಯ್ದೆಯಲ್ಲಿ ಇರುವ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು ಮನವರಿಕೆಯಾದರೆ ಜಿಲ್ಲಾಧಿಕಾರಿ ನೋಟಿಸ್ ನೀಡಿ, ನೋಟಿಸ್ ನೀಡದೆಯೂ ಲೈಸೆನ್ಸ್ ರದ್ದುಪಡಿಸುವ ಅಧಿಕಾರ ಹೊಂದಿರುತ್ತಾರೆ. ನೀವು ಯಾರೂ ಸಾಲ ನೀಡುವಾಗ ಸೆಕ್ಯುರಿಟಿ ತೆಗೆದುಕೊಳ್ಳಬಾರದು ಎಂದು ಹೇಳಿದರು. ಸೆಕ್ಷನ್ 7ರಲ್ಲಿ ಮೈಕ್ರೋ ಫೈನಾನ್ಸ್‌ಗಳು, ಸಾಲ ನೀಡಿಕೆ ಏಜೆನ್ಸಿಗಳು, ಲೇವಾದೇವಿದಾರರು ವಿಧಿಸುವ ಬಡ್ಡಿಯ ದರಗಳಲ್ಲಿ ಬಡ್ಡಿ ವಿಧಿಸುವ ಶುಲ್ಕ, ಸಂಸ್ಕರಣಾ ಶುಲ್ಕ, ವಿಮಾ ಪ್ರೀಮಿಯಂ ಮತ್ತು ವಿಳಂಬ ಪಾವತಿ ದಂಡ ಶುಲ್ಕವೆಂದು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರತಿ 3 ತಿಂಗಳಿಗೊಮ್ಮೆ ವ್ಯವಹಾರದ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಹಣಕಾಸು ವರ್ಷದ 10ನೇ ದಿನಾಂಕಕ್ಕೆ ಮೊದಲು ನೋಂದಣಿ ಪ್ರಾಧಿಕಾರಕ್ಕೆ ವ್ಯವಹಾರದ ವರದಿ ಸಲ್ಲಿಸಬೇಕು. ಮೈಕ್ರೋ ಪೈನಾನ್ಸ್ ಅಥವಾ ಸಾಲ ನೀಡಿಕೆ ಏಜೆನ್ಸಿ, ಲೇವಾಲೇವಿದಾರರು ಸ್ಥಳೀಯವಾಗಿ ನೋಂದಾಯಿತ ಕಚೇರಿ ಹೊಂದಿರಬೇಕು ಎಂದು ತಿಳಿಸಿದರು. ಯಾವುದೇ ಆಸ್ತಿ-ವಸ್ತು ವಶಪಡಿಸಿಕೊಳ್ಳುವ ಅಧಿಕಾರವಾಗಲೀ ಅಥವಾ ಸಾಲ ವಸೂಲಿಗೆ ಬಲವಂತದ ಕ್ರಮವಾಗಲೀ, ಗೂಂಡಾವರ್ತನೆಯಿಂದ ಪ್ರಾಪರ್ಟಿ ಸೀಜ್ ಮಾಡುವಂತಿಲ್ಲ. ಇಂಥ ಬಗ್ಗೆ ದೂರುಗಳು ಬಂದರೆ ಪ್ರಾಧಿಕಾರ ನೋಂದಣಿ ಅಮಾನತುಪಡಿಸಲು ಅಥವಾ ರದ್ದುಪಡಿಸಲು ಅಧಿಕಾರ ಹೊಂದಿದೆ. ಕಾಯ್ದೆ ಪ್ರಕಾರ ಕೇಸ್ ದಾಖಲಾದರೆ 10 ವರ್ಷ ಕಾರಾಗೃಹ ಶಿಕ್ಷೆಯೊಂದಿಗೆ ₹5 ಲಕ್ಷವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡ ತೆರಬೇಕಾಗುತ್ತದೆ ಎಂದು ಎಸ್‌ಪಿ ಉಮಾ ಪ್ರಶಾಂತ ಎಚ್ಚರಿಸಿದರು.

- - -

(ಟಾಪ್‌ ಕೋಟ್‌) ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ಆತ್ಮಹತ್ಯೆ ಪ್ರಕರಣವಾಗಿದೆ. ಹದಡಿ, ವಿದ್ಯಾನಗರ, ಬಡವಾಣೆ ಪೊಲೀಸ್ ಠಾಣೆಗಳಲ್ಲೂ ಕೇಸ್ ಆಗಿವೆ. ನಮ್ಮ ಕಚೇರಿಗೆ ನಿತ್ಯವೂ ದೂರು ಬರುತ್ತಿವೆ. ಅಂಕಿ ಅಂಶಗಳ ಪ್ರಕಾರ 50 ದೂರು ಅರ್ಜಿ ಬಂದಿದ್ದು, ಸುಳ್ಳು ದೂರುಗಳನ್ನು ಮುಕ್ತಾಯ ಮಾಡಿದ್ದೇವೆ. ನೈಜ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಹೊನ್ನಾಳಿಯಲ್ಲಿ ಹೆಂಡತಿ, ಮಕ್ಕಳೊಂದಿಗೆ ಹೊರಟಿದ್ದ ವೇಳೆ ರಸ್ತೆಯಲ್ಲೇ ವ್ಯಕ್ತಿ ಬೈಕ್ ಜಪ್ತಿ ಮಾಡಿದ್ದೀರಿ. ನಿಯಮಾನುಸಾರ ಸೀಜ್ ಮಾಡಬೇಕು.

- ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ಅಧೀಕ್ಷಕಿ.

- - -

-20ಕೆಡಿವಿಜಿ9, 10.ಜೆಪಿಜಿ:

ದಾವಣಗೆರೆ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮೈಕ್ರೋ ಫೈನಾನ್ಸ್, ಎಂಎಫ್‌ಐ, ಎನ್‌ಬಿಎಫ್‌ಸಿಗಳ ಅಧಿಕಾರಿಗಳು, ಪಾನ್‌ ಬ್ರೋಕರ್ಸ್‌, ಲೇವಾದೇವಿದಾರರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಪಿ ಉಮಾ ಪ್ರಶಾಂತ್ ಇದ್ದರು.