ಸಾರಾಂಶ
ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಯೂರಿಯಾ ರಸಗೊಬ್ಬರ ಮಾರಾಟ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ
ಮಾರಾಟಗಾರರಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್ಚರಿಕೆಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಯೂರಿಯಾ ರಸಗೊಬ್ಬರ ಮಾರಾಟ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮೇಶ್ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸ್ಥಳೀಯ ಕೃಷಿ ಅಧಿಕಾರಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ರಸಗೊಬ್ಬರ ಖರೀದಿಸಿದ ರೈತರಿಗೆ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ರಸೀದಿ ನೀಡಬೇಕು, ಅಂಗಡಿಯ ಹೊರಗೆ ದಾಸ್ತಾನು ಲಭ್ಯತೆ ಮತ್ತು ದರಪಟ್ಟಿ ಹಾಕಬೇಕು. ತೂಕದ ಅಳತೆಯಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು, ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಹಾಗೂ ಯೂರಿಯಾ ಜೊತೆಗೆ ಲಿಂಕ್ ಮಾರಾಟ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ರೈತರು ಖಾಸಗಿ ಮಾರಾಟ ಮಳಿಗೆಗಳಿಂದ ಬೀಜ ರಸಗೊಬ್ಬರ ಖರೀದಿಸುವಾಗ ತಪ್ಪದೇ ರಸೀದಿ ಪಡೆಯಬೇಕು, ಗರಿಷ್ಠ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ಯೂರಿಯಾ ಸಹಿತ ಎಲ್ಲ ರಸಗೊಬ್ಬರ ಸಾಕಷ್ಟು ಪೂರೈಕೆ ಆಗಲಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದರು.ಮಣ್ಣು ಮತ್ತು ಪರಿಸರದ ಆರೋಗ್ಯದ ದೃಷ್ಠಿಯಿಂದ ಮೇಲುಗೊಬ್ಬರವಾಗಿ ಹರಳು ರೂಪದ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ತಮ ಬೆಳೆ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತಿಳಿಸಿದರು.