ಬೀದಿಬದಿಯ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ: ಶಾಸಕ ಹಂಪನಗೌಡ ಭರವಸೆ

| Published : Jan 05 2025, 01:31 AM IST

ಸಾರಾಂಶ

ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಮುಖಂಡರೊಂದಿಗೆ ಶನಿವಾರ ಶಾಸಕ ಹಂಪನಗೌಡ ಬಾದರ್ಲಿ ಸಭೆ ನಡೆಸಿ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರುನಗರದ ಮುಖ್ಯರಸ್ತೆಗಳ ಬೀದಿಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಪರ್ಯಾಯ ವ್ಯವಸ್ಥೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ನಗರದ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಮುಖಂಡರೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಪಿಡಬ್ಲ್ಯೂಡಿ ಕ್ಯಾಂಪಿನ ನೀರಾವರಿ ಇಲಾಖೆಯ ಜಾಗ, ಗಂಗಾವತಿ ರಸ್ತೆಯ ಸುಕೋ ಬ್ಯಾಂಕ್ ಹಿಂಭಾಗ, ಕುಷ್ಟಗಿ ರಸ್ತೆಯ ಎಪಿಎಂಸಿ ಮಾರುಕಟ್ಟೆ ಜಾಗ, ಮಿನಿವಿಧಾನಸೌಧ ಹಿಂಭಾಗ, ಹೈದರಾಲಿ ಸರ್ಕಲ್, ಆದರ್ಶ ಕಾಲೊನಿಯ ಸಾಯಿಬಾಬಾ ದೇವಸ್ಥಾನ ಬಳಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಕ್ರಮವಹಿಸಲಾಗುವುದು. ಜೊತೆಗೆ ಪಿಕಾರ್ಡ್ ಬ್ಯಾಂಕ್ ಬಳಿಯಿರುವ ಆಹಾರ ನಿಗಮದ ಗೋಡೌನು ತೆರವುಗೊಳಿಸಿ, ಸ್ವಚ್ಛ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲಿ ಮೆಕ್ಯಾಕ್‌ಗಳಿಗೆ ಅಂಗಡಿ ಇಟ್ಟುಕೊಳ್ಳಲು ಅನುಕೂಲ ಕಲ್ಪಿಸಲಾಗುವುದು ಎಂದರು.ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮತ್ತು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರು ನಗರದಲ್ಲಿ ಒಟ್ಟು 600 ಜನ ಹಣ್ಣು, ತರಕಾರಿ, ಕಾಯಿಪಲ್ಲೆ, ಮಸಾಲೆ ಪದಾರ್ಥ ಮಾಡುವ ಬೀದಿಬದಿ ವ್ಯಾಪಾರಿಗಳಿದ್ದು, ಅದರಲ್ಲಿ 300 ಜನರಿಗೆ ದೇವರಾಜ ಅರಸು ಮಾರುಕಟ್ಟೆಯಲ್ಲಿ, 46 ಜನರಿಗೆ ಕನಕ ದಾಸ ವೃತ್ತದ ಬಳಿಯಿರುವ ಸಣ್ಣ ಮಾರುಕಟ್ಟೆಯಲ್ಲಿ, 250 ಜನರಿಗೆ ಅಪ್ನಾಮಂಡಿ ಮಾರುಕಟ್ಟೆಯಲ್ಲಿ, ಮಾಂಸದಂಗಡಿಗಳಿಗೆ ಕಾಟಿಬೇಸ್ ಮಾರ್ಕೆಟ್‌ನಲ್ಲಿ, 20, ಕಸಬ್ವಾಡಿ ಮಾರ್ಕೆಟ್ನಲ್ಲಿ 26 ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.ಹಣ್ಣು, ತರಕಾರಿ, ಕಾಯಿಪಲ್ಲೆ, ಮಸಾಲೆ ಪದಾರ್ಥಗಳ ಮಾರಾಟ ಬಿಟ್ಟು, ಇನ್ನುಳಿದ ಗ್ಯಾರೇಜ್ ಕಾರ್ಪೇಂಟರ್, ವಾರ್ಟರ್ ಸರ್ವಿಸ್, ಹೋಟೆಲ್‌ಗಳು, ರೆಗ್ಜೀನ್, ಪಂಕ್ಚರ್ ಶಾಪ್, ರೇಡಿಯಮ್ ಸ್ಟಿಕರ್ ಮತ್ತಿತರ ಅಂಗಡಿಗಳ ವ್ಯಾಪಾರಸ್ಥರು ಎಲ್ಲಿಗೆ ಹೋಗಬೇಕು ಎಂದು ಕಾರ್ಮಿಕ ಮುಖಂಡ ಶೇಕ್ಷಖಾದ್ರಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಮುಖಂಡರಾದ ಚಂದ್ರಶೇಖರ ಗೊರಬಾಳ, ಡಿ.ಎಚ್.ಪೂಜಾರ್, ನಾಗರಾಜ ಪೂಜಾರ್ ಅವರು ಹೆದ್ದಾರಿ ರಸ್ತೆಯ ಡಿವೈಡರ್‌ನಿಂದ 15 ಮೀಟರ್ ಬಿಟ್ಟು, ನಂತರ ಜಾಗದಲ್ಲಿ ತಾತ್ಕಾಲಿಕವಾಗಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಅನುಕೂಲ ಒದಗಿಸಬೇಕು. ಜೊತೆಗೆ ಲಭ್ಯವಿರುವ ವಿವಿಧ ಇಲಾಖೆಗಳ ಜಾಗವನ್ನು ನಗರಸಭೆ ಲೀಜ್ ಪಡೆದು ವ್ಯಾಪಾರಸ್ಥರಿಗೆ ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಬಿ.ಎಸ್.ತಳವಾರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಿ.ದುರುಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ಅಲಿ ಜಾಗೀರದಾರ್, ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಮುಖಂಡರಾದ ಟಿ.ಹುಸೇನಸಾಬ್, ಬಾಷುಮಿಯಾ, ಬಸವಂತರಾಯಗೌಡ ಕಲ್ಲೂರು, ವೆಂಕನಗೌಡ ಗದ್ರಟಗಿ, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ಡಾ.ವಸೀಮ್ ಅಹ್ಮದ್, ಅಬ್ದುಲ್ ಸಮ್ಮದ್ ಚೌದ್ರಿ, ಖಾಸಿಂಸಾಬ ಕಾರ್ಪೇಂಟರ್, ಅಮೀನಸಾಬ್ ನದಾಫ್, ಚಾಂದ್ಪಾಷಾ, ರಹೀಮ್ಸಾಬ, ಮಂಜುನಾಥ ಗಾಣಗೇರಾ, ಸೈಯ್ಯದ್ ಆಸೀಫ್ ನದಾಫ್, ಗಂಗಣ್ಣ ಡಿಶ್ ಇದ್ದರು.