ಚಟುವಟಿಕೆಯುತ ಕಲಿಕೆ ಪರಿಣಾಮಕಾರಿ: ಶಂಕ್ರಯ್ಯ

| Published : Apr 29 2024, 01:31 AM IST

ಚಟುವಟಿಕೆಯುತ ಕಲಿಕೆ ಪರಿಣಾಮಕಾರಿ: ಶಂಕ್ರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಟುವಟಿಕೆ ಮೂಲಕ ಕಲಿತ ಜ್ಞಾನವು ಮಕ್ಕಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ.

ಉರ್ದು, ಕನ್ನಡ ಭಾಷಾ ಕಲಿಕೆಯೊಂದಿಗೆ ಕಲಾ ಸಂಯೋಜಿತ ಚಟುವಟಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಚಟುವಟಿಕೆ ಮೂಲಕ ಕಲಿತ ಜ್ಞಾನವು ಮಕ್ಕಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕ್ರಯ್ಯ ಹೇಳಿದರು.

ಅವರು ಗುರುವಾರ ಶ್ರೀಶೈಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐಎಫ್‌ಒ ಕಲಾ ಸಂಸ್ಥೆ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉರ್ದು ಮತ್ತು ಕನ್ನಡ ಭಾಷಾ ಕಲಿಕೆಯೊಂದಿಗೆ ಕಲಾ ಸಂಯೋಜಿತ ಚಟುವಟಿಕೆ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರಾದವರು ಮಕ್ಕಳಲ್ಲಿ ಬೋಧನೆ ಮಾಡುವ ಸಮಯದಲ್ಲಿ ಚಟುವಟಿಕೆ ಮಾಡಿಸದೇ ನೇರವಾಗಿ ಇರುವ ವಿಷಯಗಳನ್ನು ಹೇಳುವುದರಿಂದ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ಮಕ್ಕಳಿಗೆ ಪಠ್ಯ ವಿಷಯದ ಜತೆಯಲ್ಲಿ ಚಟುವಟಿಕೆ ಮೂಲಕ ವಿಷಯದ ಜ್ಞಾನವನ್ನು ಹೇಳುವುದರಿಂದ ಕಲಿತ ಜ್ಞಾನವು ಮಕ್ಕಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಕಲಾಅಂರ್ತಗತ ಕಲಿಕೆ ಎಂಬ ಪರಿಕಲ್ಪನೆಯ ಮೂಲಕ ಮಕ್ಕಳಲ್ಲಿ ಸ್ಥಳೀಯವಾಗಿ ಇರುವ ಹೋರಾಟಗಾರರ ಪರಿಚಯ, ಸ್ಥಳ ಭೇಟಿ, ಚಾರಣ ಜತೆಯಲ್ಲಿ ಲಾವಣಿ ಹಾಗೂ ತತ್ವಪದಗಳನ್ನು ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಶಿಬಿರದ ಮೂಲಕ ಮಕ್ಕಳಿಗೆ ದೇಶಪ್ರೇಮ, ದೇಶಭಕ್ತಿ, ಸ್ಥಳಿಯ ಇತಿಹಾಸದ ಕುರುಹುಗಳ ಪರಿಚಯವಾಗುತ್ತದೆ. ಇದರ ಸರಿಯಾದ ರೀತಿಯ ಸದುಪಯೋಗವನ್ನು ಮಕ್ಕಳ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಂಕವಿಕಲ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಬೇಸಿಗೆ ರಜಾ ಅವಧಿಯನ್ನು ಅನೇಕ ಮಕ್ಕಳು ಅದರ ಸರಿಯಾದ ಬಳಕೆ ಮಾಡಿಕೊಳ್ಳದೇ ಸಮಯ ವ್ಯರ್ಥ ಮಾಡುವವರೇ ಹೆಚ್ಚಾಗಿದ್ದಾರೆ. ಆದರೆ ಬೇಸಿಗೆ ರಜಾ ಅವಧಿಯನ್ನು ಶಿಬಿರ ಸೇರಿದಂತೆ ಅನೇಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಆ ಅವಧಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಶ್ರೀಶೈಲನಗರ ಶಾಲೆಯಲ್ಲಿ ವಿಭಿನ್ನವಾದ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದೆ. ಶಿಬಿರದಲ್ಲಿ ನೀಡಲಾಗುವ ಜ್ಞಾನವನ್ನು ಮಕ್ಕಳು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲನಾಗಮ್ಮ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮಹೇಶ ಬಳ್ಳಾರಿ ಸ್ವಾತಂತ್ರ್ಯ ಹೋರಾಟಗಾರರಾದ ಮುಂಡರಗಿಯ ಭೀಮರಾಯರ ಕುರಿತು ಉಪನ್ಯಾಸ ನೀಡಿದರು.

ಬಿಆರ್‌ಪಿ ಶರಣಪ್ಪ ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿನಾಸಂ ಸಂಸ್ಥೆಯ ಲಕ್ಷ್ಮಣ ಪೀರಗಾರ ಹಾಜರಿದ್ದರು. ಬಹದ್ದೂರಬಂಡಿ ಕ್ಲಸ್ಟರ್ ಸಿಆರ್‌ಪಿ ಹನುಮಂತಪ್ಪ ಕುರಿ ಕಾರ್ಯಕ್ರಮ ನಿರೂಪಿಸಿದರು.

ಧನ್ವಂತರಿ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಚಕ್ರಸಾಲಿ ಸ್ವಾಗತಿಸಿದರು. ವೀರೇಶ ಬಡಿಗೇರ ವಂದಿಸಿದರು.