ಮಹಿಳೆಯರು, ಯುವಜನರು ಮತ್ತು ಅಬಲ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಸಹಕಾರ ಚಳವಳಿಯ ಉದ್ದೇಶ ಸಾಕಾರಗೊಳ್ಳಲು ಸಾಧ್ಯ.

ಕನ್ನಡಪ್ರಭ ವಾರ್ತೆ ನರಗುಂದ

ಸಹಕಾರ ಕ್ಷೇತ್ರವು ಸಮಾಜದ ಪ್ರತಿಯೊಬ್ಬರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಪ್ರಮುಖ ವೇದಿಕೆಯಾಗಿದ್ದು, ಮಹಿಳೆಯರು, ಯುವಜನರು ಮತ್ತು ಅಬಲ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಸಹಕಾರ ಚಳವಳಿಯ ಉದ್ದೇಶ ಸಾಕಾರಗೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ಬನಶ್ರೀ ಲಾನ್ಸ್ ಸಭಾಭವನದಲ್ಲಿ ಸಹಕಾರ ಇಲಾಖೆ, ಕೆಎಂಎಫ್, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಧಾರವಾಡ ಹಾಲು ಒಕ್ಕೂಟ ಹಾಗೂ ನರಗುಂದ ತಾಲೂಕಿನ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ 6ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿದ ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ, ದುರ್ಬಲ ವರ್ಗಗಳು ಮತ್ತು ಸಣ್ಣ ರೈತರ ಜೀವನಮಟ್ಟ ಸುಧಾರಣೆಗೆ ಸಹಕಾರ ಸಂಸ್ಥೆಗಳು ಆಸರೆಯಾಗಿವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಿರೋಳ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಂದ್ರಶೇಖರ ಬಿ. ಸೊಬರದ, 1986ರಲ್ಲಿ 10 ಲೀಟರ್ ಹಾಲಿನೊಂದಿಗೆ ಆರಂಭವಾದ ಸಂಘವು ಇಂದು 40 ವರ್ಷ ಪೂರೈಸಿ ಎ ಶ್ರೇಣಿ ಪಡೆದಿದ್ದು, 2025-26ನೇ ಸಾಲಿನಲ್ಲಿ 2.76 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ₹1.03 ಕೋಟಿ ಬಟವಾಡೆ ಮಾಡಿದೆ ಎಂದರು.

ನಿವೃತ್ತ ಜಂಟಿ ನಿರ್ದೇಶಕ ಡಾ. ಎಂ.ಬಿ. ಮಡಿವಾಳರ ಹಾಗೂ ಧಾರವಾಡದ ವಕೀಲೆ ಸುಜಾತಾ ಗಡಾದ ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ನಿಬಂಧಕಿ ಪುಷ್ಪಾ ಕೆ. ಕಡಿವಾಳ, ಅಧಿಕಾರಿಗಳಾದ ಪ್ರಕಾಶ ಎಚ್. ನವಲಗುಂದ, ಪ್ರಸನ್ ಎಸ್. ಪಟ್ಟೇದ, ಎಂ.ಕೆ. ಕಾಮನಗೌಡ್ರ, ಮಹಾಂತೇಶ ಎಸ್. ತಳಗಿನಮನಿ, ಪಿ.ಎಂ. ಗೆನ್ನೂರ ಉಪಸ್ಥಿತರಿದ್ದರು. ಶಾಂತವೀರಪ್ಪ ಬ. ಪಟ್ಟಣಶೆಟ್ಟರ ಪ್ರಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ದಿಲೀಪ ಐ. ನದಾಫ ವಂದಿಸಿದರು.