ಸಾರಾಂಶ
ಬಹುತೇಕ ವಿದ್ಯಾರ್ಥಿಗಳಿಗೆ ಕಠಿಣ ಎನಿಸುವ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಯೋಗ ಮತ್ತು ಪಾಠೋಪಕರಣಗಳ ಬಳಕೆ ಮಾಡುತ್ತಾರೆ
ಕುರುಗೋಡು: ತಾಲೂಕಿನ ವದ್ದಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕ ಎಚ್. ಸಿದ್ದಪ್ಪ ಮಕ್ಕಳಿಗೆ ಹೆಚ್ಚು ಪ್ರಿಯವಾದವರು.
ಏಕೆಂದರೆ ಅವರು ಬೋಧನೆಯಲ್ಲಿ ಅಳವಡಿಸಿಕೊಂಡಿರುವ ಸರಳ ವಿಧಾನಗಳು.ಬಹುತೇಕ ವಿದ್ಯಾರ್ಥಿಗಳಿಗೆ ಕಠಿಣ ಎನಿಸುವ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಯೋಗ ಮತ್ತು ಪಾಠೋಪಕರಣಗಳ ಬಳಕೆ ಮಾಡುತ್ತಾರೆ. ಮಕ್ಕಳ ಬುದ್ದಿಮಟ್ಟದ ಪ್ರಮಾಣಕ್ಕೆ ಇಳಿದು ಬೋಧಿಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೂ ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ.
ಶಾಲೆಯಲ್ಲಿರುವ ಸ್ಮಾರ್ಟ್‌ಕ್ಲಾಸ್ ಬಳಕೆಯ ಜತೆಗೆ ತಾವು ತಯಾರಿಸಿದ ಮಾದರಿಗಳ ಬಳಕೆ ಮಾಡುತ್ತಾರೆ. ಅವರು ಬೋಧಿಸುವ ವಿಷಯಗಳ ಜತೆಗೆ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಗುಣ ಹೊಂದಿರುವ ಸಿದ್ದಪ್ಪ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಿಸುವ ಕೆಲಸ ಮತ್ತು ನಿರಂತರ ಗೈರಾಗುವ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದ ಜನರಿಗೂ ಅಚ್ಚುಮೆಚ್ಚುರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ನೇಮಕಗೊಂಡಿದ್ದ ಸಿದ್ದಪ್ಪ, ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ಹೊಂದಿದ್ದರಿಂದ ೨೦೧೮ರಲ್ಲಿ ಶಿಕ್ಷಕರಾಗಿ ಆಯ್ಕೆಯಾಗಿ ಆಸಕ್ತಿಯುತ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಶಿಕ್ಷಕ ಸಿದ್ದಪ್ಪ ಅವರ ಕ್ರಿಯಾಶೀಲ ವ್ಯಕ್ತಿತ್ವ ವೃತ್ತಿ ಮಿತ್ರರ ಜತೆಗೆ ಪೋಷಕರ ಮೆಚ್ಚುಗೆಗೂ ಪಾತ್ರವಾಗಿದೆ.