ಚುನಾವಣೆಗೆ ಕಾರ್ಯಕರ್ತರು ಶಕ್ತಿ ತುಂಬಲು ಕರೆ

| Published : Mar 24 2024, 01:35 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಅಮೂಲ್ಯವಾದ ಶಕ್ತಿಯನ್ನು ತುಂಬಾ ಬೇಕಾಗಿದೆ ಎಂದು ಲೋಕಸಭಾ ಅಭ್ಯರ್ಥಿ ಯದುವೀರ್‌ ಒಡೆಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಮ್ಮ ಕನಸಿನ ನಮ್ಮ ಕಲ್ಪನೆಯ ಭಾರತ ನಿರ್ಮಾಣಕ್ಕಾಗಿ ಮೋದಿ ಸರ್ಕಾರವನ್ನು ಮತ್ತೊಮ್ಮೆ ಗೆಲ್ಲಿಸಬೇಕಾದ ಅಗತ್ಯತೆ ಇದ್ದು, ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಅಮೂಲ್ಯವಾದ ಶಕ್ತಿಯನ್ನು ತುಂಬಬೇಕಾಗಿದೆ ಎಂದು ಬಿಜೆಪಿ ಪಕ್ಷದ ಕೊಡಗು ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಕರೆ ನೀಡಿದರು.

ತಿತಿಮತಿ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ತಿತಿಮತಿ, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ, ದೇವರಪುರ ಪಂಚಾಯಿತಿಗಳ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾವೇರಿ ತವರು ಕೊಡಗಿಗೂ ಮತ್ತು ಮೈಸೂರು ರಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ. ಸಂಬಂಧವನ್ನು ಮುಂದುವರಿಸುವ ಉದ್ದೇಶದೊಂದಿಗೆ ಮತ್ತು ಈ ಭಾಗದ ಜನರ ಸೇವೆ ಮಾಡುವ ಆಕಾಂಕ್ಷೆಯೊಂದಿಗೆ ಚುನಾವಣೆ ಕಣಕ್ಕೆ ಇಳಿದಿದ್ದೇನೆ.

ಪಕ್ಷದ ಆತ್ಮ ಬಲವಾಗಿರುವ ಕಾರ್ಯಕರ್ತರು ದೇಶ ಮುನ್ನಡೆಸುವ ಮತ್ತು ಅಭಿವೃದ್ಧಿಪಡಿಸುವ ಕರ್ತವ್ಯಕ್ಕಾಗಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರಪಂಚವೇ ನಿಬ್ಬೆರಗಾಗಿ ನೋಡುವ ವಾತಾವರಣವನ್ನು ನಿರ್ಮಿಸಲಾಗಿದೆ. ಹಿಂದೆ ಅರಸು ಮನೆತನದವರು ಮೈಸೂರು ರಾಜ್ಯವನ್ನ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಸ್ವದೇಶಿ ಉತ್ಪನ್ನಗಳಿಗೆ ಸಾಕಷ್ಟು ಒತ್ತು ನೀಡಿ ಮೈಸೂರು ಬ್ರಾಂಡ್‌ನಲ್ಲಿ ಪ್ರಚಾರ ಮತ್ತು ಮಾರಾಟ ಮಾಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ಇಂದು ಮೋದಿ ಸರ್ಕಾರವು ಸ್ವದೇಶಿ ಉತ್ಪನ್ನಗಳ ಬಳಕೆಗೆ ಆದ್ಯತೆಯನ್ನು ನೀಡುತ್ತಿದೆ.

ರಾಮ ರಾಜ್ಯದ ಕನಸು ನನಸಾಗುತ್ತಾ ಸಾಗುತ್ತಿದೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪ್ರಪಂಚಕ್ಕೆ ತಿಳಿಸಲಾಗಿದೆ. ಈ ಕಾರಣಗಳೊಂದಿಗೆ, ಈ ಉದ್ದೇಶಗಳೊಂದಿಗೆ ಮೋದಿ ಸರ್ಕಾರ ಮತ್ತೊಮ್ಮೆ ಈ ದೇಶದಲ್ಲಿ ಮುನ್ನಡೆಯಬೇಕು. ಇದಕ್ಕಾಗಿ ಸರ್ಕಾರದ ಯೋಜನೆಗಳನ್ನ, ಸವಲತ್ತುಗಳನ್ನ ಮತ್ತು ಉದ್ದೇಶಗಳನ್ನ ಜನರಿಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ನಿರಂತರ ಸಾಗಬೇಕಾಗಿದೆ ಎಂದು ಮನವಿ ಮಾಡಿದರು.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ ಬೋಪಯ್ಯ ಮಾತನಾಡಿ, ಚುನಾವಣೆಯ ಯುದ್ಧಕ್ಕೆ ದೇಶವೇ ಸಜ್ಜಾಗಿದೆ. ದೇಶದ ಸುಧಾರಣೆಗಾಗಿ ಮೋದಿ ಸರ್ಕಾರದ ಗೆಲುವಿಗೆ ಕಾರ್ಯಕರ್ತರು ಪರಿಶ್ರಮ ಪಡಬೇಕಾಗಿದೆ.

ದೇಶದಲ್ಲಿ ಜನರು ಶಾಂತಿಯುತವಾದ ಬದುಕು ನಡೆಸಬೇಕೆಂದರೆ ಮೋದಿ ಸರ್ಕಾರದ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಗೊಂಡು ಎಂಟು ತಿಂಗಳ ಅವಧಿಯಲ್ಲಿ ವಿಧಾನ ಸೌಧದಲ್ಲೇ ಪಾಕಿಸ್ತಾನಕ್ಕೆ ಜಯ ಘೋಷ ಹಾಕುವ ಮೂಲಕ ಆತಂಕ ಸೃಷ್ಟಿಸಿದ್ದಾರೆ. ಇಂತಹ ಬೆಳವಣಿಗೆಯನ್ನು ನಿರ್ದಾಕ್ಷಿಣ್ಯವಾಗಿ ತಡೆಯುವ ಹಕ್ಕನ್ನು ಚಲಾಯಿಸಬೇಕಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ಈ ದೇಶದ ಸಂಸ್ಕೃತಿ ಧಾರ್ಮಿಕ ಹಿನ್ನೆಲೆಗಳನ್ನು ಜನ ಸಮುದಾಯದ ಬದುಕಿನ ಮಾರ್ಗವನ್ನು ಕಾಪಾಡಿಕೊಳ್ಳಬೇಕಾದಲ್ಲಿ ಮೋದಿ ಸರ್ಕಾರಕ್ಕೆ ಮತ್ತೆ ಶಕ್ತಿ ತುಂಬಬೇಕಾಗಿದೆ. ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವ ಮೋದಿ ಸರ್ಕಾರ ಹೊಂದಿದೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿರಾಜಪೇಟೆ ತಾಲೂಕು ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ರಾಜ್ಯ ಶಿಸ್ತು ಸಮಿತಿ ಸದಸ್ಯ ಪಟ್ಟಡ ರೀನಾ ಪ್ರಕಾಶ್, ಮಾಪಂಗಡ ಯಮುನಾ ಚಂಗಪ್ಪ, ಚುನಾವಣಾ ಉಸ್ತುವಾರಿಗಳಾದ ಡಾ. ವಿಕಾಸ್, ಡಾ. ವಸಂತ್ ಕುಮಾರ್, ಪಕ್ಷದ ಮುಖಂಡ ಅಡ್ಡಂಡ ಕಾರ್ಯಪ್ಪ, ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಮುದ್ದಿಯಡ ಮಂಜು ಗಣಪತಿ, ಶಕ್ತಿ ಕೇಂದ್ರ ಪ್ರಮುಖರು, ಸಹ ಪ್ರಮುಖರು, ಬೂತ್ ಅಧ್ಯಕ್ಷರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು.