ಸಾರಾಂಶ
ಕೊಪ್ಪಳ: ಪ್ರಸಕ್ತ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಬಹಳ ಮಹತ್ವದ್ದಾಗಿದ್ದು, ಕಾರ್ಯಕರ್ತರು ಪದವೀಧರರ ಮನವೊಲಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ತು ಚುನಾವಣೆ 2024ರ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಪರವಾಗಿ ಕೊಪ್ಪಳದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇದನ್ನು ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಶ್ರಮಿಸಿದಂತೆ ಪರಿಷತ್ ಚುನಾವಣೆಯಲ್ಲಿಯೂ ಶ್ರಮಿಸಬೇಕಾಗಿದೆ. ಇಲ್ಲಿಯೂ ಬೂತ್ ಮಟ್ಟದಲ್ಲಿ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ. ಅದರಂತೆ ಪ್ರತಿಯೊಬ್ಬ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಬೇಕು. ಪದವೀಧರರ ಮನವೊಲಿಸಬೇಕು. ಪದವೀಧರರಾಗಿ ಯುವ ನಿಧಿಯನ್ನು ನೀಡಿರುವುದನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿ ಬಿಜೆಪಿಯವರು ಬರಿ ಸುಳ್ಳಗಳನ್ನೇ ಹೇಳುತ್ತಿದ್ದಾರೆ. ಇಂಥ ಸುಳ್ಳು ಹೇಳುವವರನ್ನು ಅಧಿಕಾರದಿಂದ ದೂರ ಇಡಬೇಕು. ರಾಜ್ಯದ ಹಿತ ಮತ್ತು ಅಭಿವೃದ್ಧಿಗಾಗಿ ಪ್ರತಿಯೊಂದು ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗಾಗಿ ಶ್ರಮಿಸಬೇಕು ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ನಮ್ಮ ಅಭ್ಯರ್ಥಿ ಡಾ. ಚಂದ್ರಶೇಖರ ಅವರು ಈಗಾಗಲೇ ಅನುಭವಿ ಇದ್ದಾರೆ. ಪದವೀಧರರ ಸಮಸ್ಯೆಗಳ ಬಗ್ಗೆ ಅರಿವು ಸಹ ಇದೆ. ಸರ್ಕಾರವೂ ಇರುವುದರಿಂದ ಪದವೀಧರರ ಸಮಸ್ಯೆಯನ್ನು ಇತ್ಯರ್ಥ ಮಾಡಲು ಸುಲಭವಾಗುತ್ತದೆ. ಹೀಗಾಗಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಈಶಾನ್ಯ ಪದವೀಧರ ಕ್ಷೇತ್ರ ಅತ್ಯಂತ ವಿಶಾಲವಾದುದು. ಹೀಗಾಗಿ, ಕೇವಲ ಅಭ್ಯರ್ಥಿಯೇ ಎಲ್ಲ ಕಡೆಯೂ ಸುತ್ತಾಡಲು ಸಾಧ್ಯವಿಲ್ಲ. ಹೀಗಾಗಿ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಾವೇ ಅಭ್ಯರ್ಥಿಗಳು ಎನ್ನುವಂತೆ ಗೆಲುವಿಗಾಗಿ ಶ್ರಮಿಸಬೇಕು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ, ಕೆಪಿಸಿಸಿ ಕಾರ್ಯಧ್ಯಕ್ಷ ಎ. ವಸಂತಕುಮಾರ, ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ, ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ತು ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಕೊಪ್ಪಳ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ, ಮುಖಂಡರಾದ ಯಂಕಣ್ಣ ಯರಾಶಿ, ಇಂದಿರಾ ಬಾವಿಕಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಕಿಶೋರಿ ಬೂದನೂರು, ಗೂಳಪ್ಪ ಹಲಗೇರಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಿಬಿ, ಕೃಷ್ಣ ಇಟ್ಟಂಗಿ, ವೀರಣ್ಣ ಗಾಣಿಗೇರ, ವೈಜನಾಥ ದಿವಟರ್ ಉಪಸ್ಥಿತರಿದ್ದರು.