ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಬಂದ್ ವೇಳೆ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸಿದ ವರ್ತಕರಿಗೆ ಶ್ರೀರಾಮ ಸೇನಾ ಹಾಗೂ ಗೋಸಾವಿ ಸಮಾಜದ ಯುವಕರು ಗುಲಾಬಿ ಹೂ ನೀಡಿ ಕೃತಜ್ಞತೆ ಸಲ್ಲಿಸಿದರು.
ಪಟ್ಟಣದ ಗೋಸಾವಿ ಸಮಾಜದ ಯುವಕರ ಮೇಲೆ ಲಕ್ಷ್ಮೇಶ್ವರ ಪಿಎಸ್‌ಐ ಈರಣ್ಣ ರಿತ್ತಿ ನಡೆಸಿದ ಹಲ್ಲೆ ಖಂಡಿಸಿ ಅ.೧೯ ರಂದು ಶ್ರೀರಾಮ ಸೇನಾ ಕರೆ ನೀಡಿದ್ದ ಬಂದ್‌ಗೆ ಸಹಕರಿಸಿ ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾರಿ ಬಂದ್ ಮಾಡಿದ ವರ್ತಕರಿಗೆ ಶ್ರೀರಾಮ ಸೇನಾ ಹಾಗೂ ಗೋಸಾವಿ ಸಮಾಜ ಬಾಂಧವರು ಗುಲಾಬಿ ಹೂ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.ಲಕ್ಷ್ಮೇಶ್ವರದ ಮುಖ್ಯ ಮಾರುಕಟ್ಟೆಯಲ್ಲಿನ ಪ್ರತಿ ಅಂಗಡಿಗೆ ತೆರಳಿದ ಶ್ರೀರಾಮ ಸೇನಾ ಕಾರ್ಯಕರ್ತರು ಬಂದ್ ಅಂಗವಾಗಿ ಅಂಗಡಿ ಮುಂಗಟ್ಟು ತೆರೆಯದೇ ಸಹಕರಿಸಿದ ವರ್ತಕರಿಗೆ, ಕೈ ಗಾಡಿ ಅಂಗಡಿಗಳ ಮಾಲಿಕರಿಗೆ, ಹೊಟೇಲ್ ಮಾಲಿಕರಿಗೆ, ಕಿರಾಣಿ ಅಂಗಡಿಗಳ ಮಾಲಿಕರಿಗೆ, ವಿವಿಧ ಬಡಾವಣೆಗಳಲ್ಲಿನ ಅಂಗಡಿಗಳ ಮಾಲಿಕರಿಗೆ ಗುಲಾಬಿ ಹೂ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನಾ ಅಧ್ಯಕ್ಷ ಈರಣ್ಣ ಪೂಜಾರಿ, ವಿಜಯದಶಮಿಯಂದು ಶಾಂತಿಯುತವಾಗಿ ದುರ್ಗಾ ಮೂರ್ತಿ ವಿಸರ್ಜಿಸಿ ಬರುತ್ತಿದ್ದ ಗೋಸಾವಿ ಸಮಾಜದ ಯುವಕರ ಮೇಲೆ ಮುಸ್ಲೀಂ ಯುವಕರು ಹಲ್ಲೆ ನಡೆಸಿದ್ದಾರೆ. ಗೋಸಾವಿ ಯುವಕರು ಧರಿಸಿದ್ದ ಕೇಸರಿ ಶಾಲನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಮುಸ್ಲೀಂ ಯುವಕರ ದುರ್ವರ್ತನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ತೆರಳಿದಾಗ ದೂರು ದಾಖಲಿಸುವ ಬದಲಿಗೆ ಗೋಸಾವಿ ಸಮಾಜದ ಯುವಕರು, ಮಹಿಳೆಯರ ಮೇಲೆಯೇ ಪಿಎಸ್‌ಐ ಈರಣ್ಣ ರಿತ್ತಿ ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಇದು ಅನ್ಯಾಯದ ಪರಮಾವಧಿಯಾಗಿದೆ. ಒಂದು ಕೋಮಿನ ಜನತೆಯನ್ನು ಓಲೈಸಲು ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಆಗಮಿಸಿದ ವ್ಯಕ್ತಿಗಳ ಮೇಲೆಯೇ ಪಿಎಸ್‌ಐ ಈರಣ್ಣ ರಿತ್ತಿ ಲಾಠಿಯಿಂದ ಹೊಡೆದಿರುವದು ಪ್ರಜಾಪ್ರಭುತ್ವದ ಅಣಕವಾಗಿದೆಯೆಂದು ವಿಷಾದಿಸಿದರು.ಸರ್ಕಾರಿ ಸಂಬಳ ಪಡೆಯುವ ಪಿಎಸ್‌ಐ ಈರಣ್ಣ ರಿತ್ತಿ ಸಮಾಜದಲ್ಲಿನ ಎಲ್ಲ ಧರ್ಮ, ಜಾತಿಗಳ ಜನರಿಗೆ ನ್ಯಾಯ ಕೊಡಿಸಬೇಕಾಗಿದ್ದು ಅವರ ಕರ್ತವ್ಯವವಾಗಿದೆ. ಪಿಎಸ್‌ಐ ಈರಣ್ಣ ರಿತ್ತಿ ತಮ್ಮ ಕರ್ತವ್ಯ ಮರೆತು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಂತೆ ವರ್ತಿಸಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆಂದು ಆರೋಪಿಸಿದರು.
ಲಕ್ಷ್ಮೇಶ್ವರ ಪಿಎಸ್‌ಐ ಈರಣ್ಣ ರಿತ್ತಿ ಗೋಸಾವಿ ಸಮಾಜದ ಯುವಕರು, ಮಹಿಳೆಯರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ಘಟನೆ ಖಂಡಿಸಿ ಶ್ರೀರಾಮ ಸೇನಾ, ಗೋಸಾವಿ ಸಮಾಜ ಬಾಂಧವರು ಅ.೧೯ ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿದಾಗ ಕೆಲ ಪೊಲೀಸ ಕೃಪಾಪೋಷಿತ ಸಂಘಟನೆಗಳ ಸದಸ್ಯರು ಬಂದ್ ನಡೆಸಲು ಅವಕಾಶ ನೀಡುವದಿಲ್ಲ. ಬಂದ್ ದಿನ ಎಲ್ಲ ಅಂಗಡಿ, ಮುಂಗಟ್ಟು ತೆರೆಯುವಂತೆ ಮಾಡುತ್ತೇವೆ. ಅಂಗಡಿಗಳನ್ನು ಪ್ರಾರಂಭಿಸಿದ ಅಂಗಡಿಗಳ ಮಾಲಿಕರಿಗೆ ಗುಲಾಬಿ ಹೂ ನೀಡುವದಾಗಿ ಬೊಗಳೆ ಬಿಟ್ಟಿದ್ದರು. ದುರ್ಧೈವಶಾತ್ ಪೊಲೀಸ್ ಕೃಪಾಪೋಷಿತ ಸಂಘಟನೆಗಳ ಸದಸ್ಯರು ಯಾವದೇ ಸದಸ್ಯರು ಬಂದ್ ನಡೆದ ಸಂದರ್ಭದಲ್ಲಿ ಆಗಮಿಸಲಿಲ್ಲ. ಬಂದ್ ನಡೆದಾಗ ಹೊರಗಡೆ ಬಂದಲ್ಲಿ ತಮ್ಮ ಮೇಲೆ ಏನಾದರೂ ಪ್ರಕರಣ ಬಂದಲ್ಲಿ ಹೇಗೆ ಎಂದು ಹೆದರಿ ಮನೆಯಲ್ಲಿ ಕುಳಿತಿದ್ದರೆಂದು ಲೇವಡಿ ಮಾಡಿದರು.ಈ ವೇಳೆ ಮುತ್ತು ಕರ್ಜಿಕಣ್ಣವರ, ಬಸವರಾಜ ಚಕ್ರಸಾಲಿ, ಪ್ರಾಣೇಶ್ ವ್ಯಾಪಾರಿ, ಪ್ರಕಾಶ್ ಕಾಮಡೊಳ್ಳಿ, ಪ್ರವೀಣ್ ಬನ್ನಿಕೊಪ್ಪ, ಮಲ್ಲಿಕಾರ್ಜುನ ಹಾಳದೋಟದ, ಅಕ್ಷಯ್ ಕುಮಾರ್, ಪವನ್ ಹಗ್ಗರದ, ಹನುಮಂತ ರಾಮಗೇರಿ, ಅಮಿತ್ ಗುಡಗೇರಿ, ಯಶವಂತ ಭಜಂತ್ರಿ, ಸುನಿಲ್ ಗೋಸಾವಿ, ಗೋವಿಂದ್ ಗೋಸಾವಿ, ರಾಘವೇಂದ್ರ ಗೋಸಾವಿ, ವಿಕ್ರಂ ಗೋಸಾವಿ, ಮಾದೇಶ್ ಗೋಸಾವಿ, ಕಿಶನ್ ಗೋಸಾವಿ, ಆಕಾಶ್ ಗೋಸಾವಿ ನಿಖಿಲ್ ಗೋಸಾವಿ ಹರೀಶ್ ಗೋಸಾವಿ, ರಾಜು ಗೋಸಾವಿ, ಪ್ರವೀಣ್ ಗುಡಿಗೇರಿ ಮಹೇಶ್ ಮುಳುಗುಂದ ಇದ್ದರು.