ಹೋರಾಟದ ನೆಲವಾದ ಶಿವಮೊಗ್ಗದಲ್ಲಿ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾರ್ಯಕರ್ತರು ಹೋರಾಟ ರೂಪಿಸಬೇಕು. ಹೋರಾಟದ ವಿಚಾರದಲ್ಲಿ ಯಡಿಯೂರಪ್ಪನವರೇ ನಮಗೆಲ್ಲ ಮಾದರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಮೊಗ್ಗ: ಹೋರಾಟದ ನೆಲವಾದ ಶಿವಮೊಗ್ಗದಲ್ಲಿ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾರ್ಯಕರ್ತರು ಹೋರಾಟ ರೂಪಿಸಬೇಕು. ಹೋರಾಟದ ವಿಚಾರದಲ್ಲಿ ಯಡಿಯೂರಪ್ಪನವರೇ ನಮಗೆಲ್ಲ ಮಾದರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಹೋರಾಟದ ಮೂಲಕ ಯಡಿಯೂರಪ್ಪ ಬೆಂಬಲ ನೀಡಿದ್ದರು. ಹಲವು ವರ್ಷಗಳ ಹೋರಾಟದ ಫಲವಾಗಿ ಬಿಜೆಪಿ ಬೆಳೆದು ನಿಂತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ನಮ್ಮ ಪಕ್ಷದ ವೈಫಲ್ಯದಿಂದಾಗಿಯೇ ಹೊರತು ಕಾಂಗ್ರೆಸ್ ಪಕ್ಷದ ಗೆಲುವು ಅವರ ಸಾಧನೆಯಲ್ಲ. ಗ್ಯಾರಂಟಿ ದೇಶಕ್ಕೆ ಮಾದರಿ ಎಂದ ಸಿದ್ಧರಾಮಯ್ಯ ಸರಿಯಾಗಿ ಅಧಿಕಾರ ನಡೆಸಲು ವಿಫಲರಾಗಿದ್ದಾರೆ. ತೆಲಂಗಾಣದಲ್ಲಿ ಗ್ಯಾರಂಟಿ ಸೋತಿದೆ. ಇದೇ ಗ್ಯಾರಂಟಿ ಕೊಡುತ್ತೇವೆಂದು ಹೇಳಿ ಅಲ್ಲಿ ಸೋತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿಯಿಂದಾಗಿ ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಭದ್ರಾವತಿ ಸೇರಿದಂತೆ ಶಿವಮೊಗ್ಗದಲ್ಲಿ ಮುನ್ನಡೆ ಸಾಧಿಸಬೇಕಿದೆ. ಒತ್ತಡದ ನಡುವೆ ನಮ್ಮ ಸಂಘಟನೆ ಬಲಪಡಿಸುವ ಕೆಲಸ ಮಾಡಬೇಕಿದೆ. ಕಾರ್ಯಕರ್ತರ ಮನೆಗೆ ಹೋದಾಗ ಅವರ ಕಷ್ಟಕ್ಕೆ ಸ್ಪಂದಿಸಬೇಕಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲವೆಂದ ಕೂಡಲೇ ಪಕ್ಷ ಬಲಹೀನವಾಗಿಲ್ಲ. ಅಂಜಿಕೊಳ್ಳದೇ ಪಕ್ಷದ ಮುಖಂಡರು ಪ್ರವಾಸ ಮಾಡಿ ಎಂದು ಬಿ.ವೈ. ವಿಜಯೇಂದ್ರ ಸೂಚಿಸಿದರು.ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.