ಸಾರಾಂಶ
ಕೊಲೆ ಆರೋಪದಡಿ ಜೈಲಿನಲ್ಲಿರುವ ನಟ ದರ್ಶನ್ ಅವರು ಟಿವಿಗಾಗಿ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಲು ಸಿರುಗುಪ್ಪದಿಂದ ಬಂದ ಅಂಧ ವ್ಯಕ್ತಿಗೆ ಜೈಲು ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ.
ಬಳ್ಳಾರಿ: ಕೊಲೆ ಆರೋಪದಡಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಟಿವಿ ನೀಡುವಂತೆ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ.
ಟಿವಿ ರಿಪೇರಿಗೆ ಹೋಗಿದ್ದು, ಬಂದ ಬಳಿಕ ಸೆಲ್‌ನಲ್ಲಿ ಅಳವಡಿಸಲಾಗುವುದು ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಟಿವಿಯ ಬಗ್ಗೆ ದರ್ಶನ್ ವಿಚಾರಿಸುತ್ತಿದ್ದಾರೆ. ಜೈಲು ಸಿಬ್ಬಂದಿಯ ಹೇಳಿಕೆಯಿಂದ ತೀವ್ರ ಬೇಸರಗೊಂಡಿರುವ ನಟ ದರ್ಶನ್, ಟಿವಿಗಾಗಿ ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದ್ದು ಸಮಯ ಕಳೆಯಲು ಕೆಲ ಹೊತ್ತು ಪುಸ್ತಕ ಓದಿ, ಬಳಿಕ ನಿದ್ರೆಗೆ ಜಾರುತ್ತಿದ್ದಾರೆ. ಮೂಲಗಳ ಪ್ರಕಾರ ನಟ ದರ್ಶನ್ ಬಹುತೇಕ ಸಮಯವನ್ನು ನಿದ್ರೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇನ್ನು ಮೂರು ದಿನಗಳ ಬಳಿಕವಷ್ಟೇ ಟಿವಿ ಅಳವಡಿಸುವ ಸಾಧ್ಯತೆಯಿದೆ.ದರ್ಶನ್‌ನ ನಿತ್ಯ ಚಲನವಲನಗಳ ಸಿಸಿಟಿವಿ ಫುಟೇಜ್‌ನ್ನು ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಡಲಾಗುತ್ತಿದೆ. ಜೈಲು ಸಿಬ್ಬಂದಿ ಆದಷ್ಟು ಆತನಿಂದ ದೂರವಿರಿ ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಭೇಟಿಗೆ ಬಂದಿದ್ದ ಅಂಧ:ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಭೇಟಿ ಮಾಡಲು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ಅಂಧ ರಾಜಾಸಾಬ್ ಆಗಮಿಸಿದ್ದರು. ಆದರೆ, ಜೈಲು ಸಿಬ್ಬಂದಿ ಒಳಗೆ ಬಿಡಲು ಪ್ರವೇಶ ನೀಡದ ಹಿನ್ನೆಲೆಯಲ್ಲಿ ವಾಪಸ್ಸಾದರು. 2018ರಲ್ಲಿ ರಾಜಾಸಾಬ್‌ಗೆ ದರ್ಶನ್ ₹50 ಸಾವಿರ ನೆರವು ನೀಡಿದ್ದರಂತೆ. ಹೀಗಾಗಿ ಈತ ದರ್ಶನ್ ಭೇಟಿಗೆ ಬಂದಿದ್ದ.