ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ನಾಗರಾಜ್ ಅ. ನಾಗ ಹಾಗೂ ಲಕ್ಷ್ಮಣ್ ಅವರನ್ನು ಬೆಂಗಳೂರು ಪೊಲೀಸರು ಮೈಸೂರಿಗೆ ಕರೆತಂದು ಸ್ಥಳ ಮಹಜರು ನಡೆಸಿದರು.ದರ್ಶನ್ ರ ಪರ್ಸನಲ್ ಮ್ಯಾನೇಜರ್ ನಾಗರಾಜು ಹಾಗೂ ಕಾರಿನ ಚಾಲಕ ಲಕ್ಷ್ಮಣ್ ಅವರನ್ನು ಬೆಂಗಳೂರು ಪೊಲೀಸರು ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ ಗೆ ಮಧ್ಯಾಹ್ನದ ವೇಳೆಗೆ ಕರೆತಂದು ಸ್ಥಳ ಮಹಜರು ನಡೆಸಿದರು. ನಟ ದರ್ಶನ್ ರನ್ನು ಹೋಟೆಲ್ ನಲ್ಲಿ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರಿಗಾಗಿ ಆರೋಪಿಗಳಿಬ್ಬರನ್ನು ಪೊಲೀಸರು ಕರೆತಂದು ಮಹಜರು ನಡೆಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಮೈಸೂರಿಗೆ ಆಗಮಿಸಿ ರ್‍ಯಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಉಳಿದುಕೊಂಡು ಲಲಿತಮಹಲ್ ಹೋಟೆಲಿನಲ್ಲಿ ನಡೆಯುತ್ತಿರುವ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.ದರ್ಶನ್ ಈ ಹೋಟೆಲ್ ನಿಂದ ಮೈಸೂರಿನ ಕುವೆಂಪುನಗರದ ಗೋಲ್ಡ್ ಜಿಮ್ ಗೆ ತೆರಳಿ ಅಲ್ಲಿ ವರ್ಕೌಟ್ ಮಾಡಿ ನಂತರ ರ್‍ಯಾಡಿಸನ್ ಬ್ಲೂ ಹೋಟೆಲ್ ಗೆ ಆಗಮಿಸುವ ಮಾರ್ಗ ಮಧ್ಯೆ ಬೆಂಗಳೂರು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಹೋಟೆಲ್ ಗೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದ ಪೊಲೀಸರು, ಸತತ ಎರಡು ಗಂಟೆಗಳ ಕಾಲ ಇಬ್ಬರು ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಿದರು.ಹೋಟೆಲ್ ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದರು. ಕೊಲೆಯಾದ ಬಳಿಕ ಹೋಟೆಲ್ ನಲ್ಲಿ ನಡೆಸಿದ ಚರ್ಚೆ ಮತ್ತು ಮಾತುಕತೆಯ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದರಲ್ಲದೇ ಆರೋಪಿಗಳಿಂದ ಮಾಹಿತಿ ಪಡೆದು ಮಹಜರು ನಡೆಸಿದರು. ಜತೆಗೆ ಅಂದು ಕಾರ್ಯ ನಿರ್ವಹಿಸಿದ್ದ ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಜೂ. 8ರಂದು ಬೆಂಗಳೂರಿನ ಶೆಡ್ ನಲ್ಲಿ ಕೊಲೆಯಾದ ಬಳಿಕ ನಟ ದರ್ಶನ್ ತನ್ನ ಸಹಚರರೊಂದಿಗೆ ಮೈಸೂರಿಗೆ ಬಂದಿದ್ದು, ಹೋಟೆಲ್ ನಲ್ಲಿ ತಂಗಿದ್ದರು. ಕೊಲೆಗೂ ಮುನ್ನ ಹೋಟೆಲ್ ನಲ್ಲಿ ದರ್ಶನ್ ಯಾರನ್ನು ಭೇಟಿಯಾದರು. ಜತೆಯಲ್ಲಿ ಯಾರು ಇದ್ದರು. ಕೊಲೆಯಾದ ಬಳಿಕ ಮತ್ತೆ ಮೈಸೂರಿಗೆ ಬಂದ ಮೇಲೆ ಹೋಟೆಲ್ ನ ಕೋಣೆಯಲ್ಲಿ ದರ್ಶನ್ ಯಾರೊಂದಿಗೆ ಮಾತುಕತೆ ನಡೆಸಿದರು. ಮೊದಲಾದ ಮಾಹಿತಿಯನ್ನು ಮಹಜರು ವೇಳೆ ಪೊಲೀಸರು ಕಲೆ ಹಾಕಿದರು.ನಂತರ ದರ್ಶನ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಹೋಟೆಲ್ ಲಲಿತ ಮಹಲ್, ಆನಂತರ ಮೈಸೂರು ಟಿ. ನರಸೀಪುರ ರಸ್ತೆಯ ದರ್ಶನ ಫಾರಂ ಹೌಸಿಗೂ ಕರೆತಂದು ಸ್ಥಳ ಪರಿಶೀಲಿಸಿದರು.
ಮಹಜರಿಗೆ ನಟ ದರ್ಶನ್ ನನ್ನು ಕರೆದುಕೊಂಡು ಬರಲಾಗಿದೆ ಎಂದು ದರ್ಶನ್ ಅವರ ನೂರಾರು ಮಂದಿ ಅಭಿಮಾನಿಗಳು ಹೋಟೆಲ್ ಸುತ್ತ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು.ಸತತ ಎರಡು ಗಂಟೆ ಮಹಜರು ಬಳಿಕ ವ್ಯಾನಿನಲ್ಲಿ ಆರೋಪಿಗಳನ್ನು ಹೋಟೆಲ್ನಿಂದ ಬೆಂಗಳೂರಿಗೆ ಕರೆದೊಯ್ಯಲಾಯಿತು.