ನಟ ದರ್ಶನ್‌ಗೆ ಬಿಮ್ಸ್‌ನಲ್ಲಿ ಎಂಆರ್‌ಐ ಸ್ಕ್ಯಾನ್

| Published : Oct 23 2024, 01:55 AM IST

ಸಾರಾಂಶ

ಬಿಮ್ಸ್‌ನ ಎಂಆರ್‌ಐ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ, ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿಶ್ವನಾಥ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ ಅವರ ಸಮ್ಮುಖದಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.

ಬಳ್ಳಾರಿ: ಕೊಲೆ ಪ್ರಕರಣದ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರ ಬೆನ್ನುನೋವಿನ ಚಿಕಿತ್ಸೆ ಹಿನ್ನಲೆಯಲ್ಲಿ ನಗರದ ಬಳ್ಳಾರಿ ಮೆಡಿಕಲ್ ಕಾಲೇಜು (ಬಿಮ್ಸ್‌)ಗೆ ಮಂಗಳವಾರ ರಾತ್ರಿ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್‌ ಮಾಡಲಾಯಿತು.

ಸಂಜೆ 6 ಗಂಟೆಗೆ ನಟ ದರ್ಶನ್‌ರನ್ನು ಬಿಮ್ಸ್‌ಗೆ ದಾಖಲಿಸುವ ಸಂಬಂಧ ಜೈಲಿನ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ ನೇತೃತ್ವದ ವೈದ್ಯರ ತಂಡ ಜೈಲಿಗೆ ತೆರಳಿ ನಟ ದರ್ಶನ್ ಅವರ ಆರೋಗ್ಯ ಪರೀಕ್ಷಿಸಿ, ಬಳಿಕ ವರದಿಯನ್ನು ಜೈಲಿಗೆ ಅಧಿಕಾರಿಗಳಿಗೆ ನೀಡಿದರು.

ಈ ಎಲ್ಲ ಪ್ರಕ್ರಿಯೆಗಳಿಂದಾಗಿ ಸುಮಾರು ತಾಸುಗಳ ಬಳಿಕ ನಟ ದರ್ಶನ್ ರನ್ನು ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಬಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ತಲುಪಿದ ನಟ ದರ್ಶನ್ ನೋವಿನಿಂದ ನರಳುತ್ತಲೇ ನ್ಯೂರೋ ವಿಭಾಗದ ಕಡೆ ತೆರಳಿದರು.

ರಾತ್ರಿ 9.20ರ ಸುಮಾರಿಗೆ ಎಂಆರ್‌ಐ ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು. ಬಿಮ್ಸ್‌ನ ಎಂಆರ್‌ಐ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ, ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿಶ್ವನಾಥ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ ಅವರ ಸಮ್ಮುಖದಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.

ತೀವ್ರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಟ ದರ್ಶನ್‌ಗೆ ಕೆಲ ದಿನಗಳ ಹಿಂದೆಯಷ್ಟೇ ವೈದ್ಯಕೀಯ ತಪಾಸಣೆ ನಡೆಸಿದ್ದ ಬಿಮ್ಸ್‌ನ ನರರೋಗ ಚಿಕಿತ್ಸಾ ತಜ್ಞ ಡಾ. ವಿಶ್ವನಾಥ್ ಅವರು ಬೆನ್ನುನೋವು ಸಮಸ್ಯೆ ನಿವಾರಣೆಗೆ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಅಗತ್ಯವಿದೆ ಎಂದು ಜೈಲು ಅಧಿಕಾರಿಗಳಿಗೆ ವರದಿ ನೀಡಿದ್ದರು. ಆದರೆ, ಸ್ಥಳೀಯವಾಗಿ ಚಿಕಿತ್ಸೆ ಪಡೆದುಕೊಳ್ಳಲು ನಿರಾಕರಿಸಿದ್ದ ನಟ ದರ್ಶನ್, ನೋವು ನಿವಾರಣೆ ಮಾತ್ರೆ ನೀಡಿ. ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು.

ಬೆನ್ನುನೋವಿನ ಸಮಸ್ಯೆ ದಿನದಿನಕ್ಕೆ ಉಲ್ಬಣಗೊಳ್ಳುತ್ತಿರುವುದರಿಂದ ಜೈಲಿನ ಅಧಿಕಾರಿಗಳು ಅನೇಕ ಬಾರಿ ಸ್ಥಳೀಯವಾಗಿ ಚಿಕಿತ್ಸೆಗೆ ಸೂಚಿಸಿದ್ದಾಗ್ಯೂ ನಟ ದರ್ಶನ್ ಒಪ್ಪಿರಲಿಲ್ಲ. ಮಂಗಳವಾರ ಜೈಲಿಗೆ ಭೇಟಿ ನೀಡಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮೂಲಕ ಚಿಕಿತ್ಸೆಗೆ ಒಪ್ಪಿಸಲಾಗಿದ್ದು, ಮಂಗಳವಾರ ಸಂಜೆ ಬಳಿಕ ಚಿಕಿತ್ಸೆಗೆ ಬಿಮ್ಸ್‌ ದಾಖಲಿಸಲು ಅಗತ್ಯ ಸಿದ್ಧತೆಯನ್ನು ಜೈಲು ಅಧಿಕಾರಿಗಳು ಮಡಿಕೊಂಡರು.

ಜೈಲಿನಲ್ಲಿರುವ ಪತಿ ನಟ ದರ್ಶನ್ ಅವರನ್ನು ಭೇಟಿಯಾಗಲು ಮಂಗಳವಾರ ಆಗಮಿಸಿದ್ದ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಪತ್ನಿಯನ್ನು ಭೇಟಿ ಮಾಡಲು ಹೈಸೆಕ್ಯೂರಿಟಿ ಸೆಲ್‌ನಿಂದ ನಟ ದರ್ಶನ್, ನಿಧಾನಗತಿಯಲ್ಲಿಯೇ ನಡೆದುಕೊಂಡು ಬಂದರು. ಪತ್ನಿ ಜೊತೆ ಆರೋಗ್ಯ ಸಂಬಂಧಿ ಚರ್ಚಿಸಿದ ದರ್ಶನ್, ಜಾಮೀನು ಕುರಿತು ವಕೀಲರೊಂದಿಗಿನ ಮಾತುಕತೆ ಕುರಿತು ಪತ್ನಿ ಜೊತೆ ಕೆಲ ಹೊತ್ತು ಮಾತನಾಡಿದರು. ಬಳಿಕ ಸಂಜೆ ಬಿಮ್ಸ್‌ ಆಸ್ಪತ್ರೆಗೆ ತೆರಳುವ ಸಂಬಂಧದ ಸಿದ್ಧತೆಯಲ್ಲಿ ದರ್ಶನ್ ತೊಡಗಿಸಿಕೊಂಡರು.

ದರ್ಶನ್ ನೋಡಲು ಬಿಮ್ಸ್ ಆಸ್ಪತ್ರೆಯ ಮುಂಭಾಗ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರಲ್ಲದೆ, ದರ್ಶನ್ ಪರ ಘೋಷಣೆಗಳನ್ನು ಕೂಗಿದರು.