ನಟ ದರ್ಶನ್ ಬಂಧನ ನಿಜಕ್ಕೂ ಶಾಕ್: ಶಾಸಕ ದರ್ಶನ್

| Published : Jun 14 2024, 01:01 AM IST

ಸಾರಾಂಶ

ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಕೋರ್ಟ್ ಮತ್ತೆ ಆದೇಶ ನೀಡಿದ್ದು, ಪಾಲಿಸದಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ನನ್ನೊಂದಿಗೆ ಚರ್ಚಿಸಿದ್ದಾರೆ ಎಂದರು.

ಪಾಂಡವಪುರ: ಚಿತ್ರನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವುದು ನನಗೆ ನಿಜಕ್ಕೂ ಶಾಕ್ ಆಗಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು. ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರು ಕೊಲೆ ಮಾಡಿಲ್ಲ ಎಂದು ಪ್ರೂ ಆಗಬಹುದೇನೂ ನನಗೆ ಗೊತ್ತಿಲ್ಲ. ಆದರೆ, ನ್ಯಾಯಾಲಯದ ತೀರ್ಪಿಗೆ ತಲೆಬಾಗಲೇಬೇಕಾಗುತ್ತದೆ ಎಂದರು. ದರ್ಶನ್ ನನಗೆ ಹಿಂದೆಯೂ ಸ್ನೇಹಿತರು ಈಗಲೂ ಸ್ನೇಹಿತರೇ. ಈ ವಿಚಾರವಾಗಿ ನಾನು ಅವರೊಂದಿಗೆ ಚರ್ಚಿಸಿಲ್ಲ. ಪ್ರಕರಣದ ವಿಚಾರವನ್ನು ಆಲಿಸಿ ಕೋರ್ಟ್ ಯಾವ ತೀರ್ಪು ನೀಡಲಿದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದರು.

ಟ್ರಯಲ್ ಬ್ಲಾಸ್ಟ್ ಗೆ ಚರ್ಚಿಸಿ ಕ್ರಮ:

ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಕೋರ್ಟ್ ಮತ್ತೆ ಆದೇಶ ನೀಡಿದ್ದು, ಪಾಲಿಸದಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ನನ್ನೊಂದಿಗೆ ಚರ್ಚಿಸಿದ್ದಾರೆ ಎಂದರು.

ರೈತಸಂಘಟನೆ ಮೊದಲಿಂದಲೂ ಟ್ರಯಲ್ ಬ್ಲಾಸ್ ವಿರೋಧಿಸಿಕೊಂಡು ಬಂದಿದ್ದೇವೆ. ನಮಗೆ ಕೈಕುಳಿ ಮಾಡುವುದಕ್ಕೆ ಅಭ್ಯಂತರವಿಲ್ಲ, ರಿಗ್‌ಬೋರ್ ಬ್ಲಾಸ್ಟಿಂಗ್ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹಿರಿಯರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಕುಳಿತು ಚರ್ಚಿಸಿ ಟ್ರಯಲ್ ಬ್ಲಾಸ್ಟಿಂಗ್ ವಿಚಾರವಾಗಿ ಕ್ರಮವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾಲೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ:

ವಿಸಿ ನಾಲೆಯ ಕಾಮಗಾರಿ ವಿಚಾರವಾಗಿ ನಾನು ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಅವರು ಜೂನ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ರೈತಸಂಘಟನೆ ಮತ್ತು ನಾನು ಎಲ್ಲರೂ ಮೊದಲಿಂದಲೂ ನಾಲೆ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು ಎನ್ನುವ ಬಗ್ಗೆ ಒತ್ತಡ ಹಾಕುತ್ತಲೇ ಬಂದಿದ್ದೇವೆ. ರೈತರು ಜುಲೈ 15ರ ಬಳಿಕ ಬಿತ್ತನೆ ಕಾರ್‍ಯ ನಡೆಸುತ್ತಾರೆ. ಅಷ್ಟರೊಳಗೆ ನಾಲೆ ಕಾಮಗಾರಿ ಅಂತ್ಯಗೊಳಿಸಿ ನಾಲೆಗೆ ನೀರು ಬಿಡಿಸಲು ಕ್ರಮವಹಿಸಲಾಗುವುದು ಎಂದರು.