ಸಾರಾಂಶ
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ನನ್ನು ಪತ್ನಿ ವಿಜಯಲಕ್ಷ್ಮಿ, ಅಳಿಯ ಹೇಮಂತ್, ಸುಶಾಂತ್ ನಾಯ್ಡು ಸೋಮವಾರ ಭೇಟಿ ಮಾಡಿದರು.
ನಟ ದರ್ಶನ್ ಕುಟುಂಬ ಸದಸ್ಯರು ಜೈಲಿಗೆ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರು ತಂದಿದ್ದ ಎರಡು ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿ, ವಿಜಿಟರ್ ಕೊಠಡಿಗೆ ಕಳುಹಿಸಿದರು.ಬಳಿಕ ಹೈಸೆಕ್ಯೂರಿಟಿ ಸೆಲ್‌ನಲ್ಲಿದ್ದ ನಟ ದರ್ಶನ್ ಅವರನ್ನು ಜೈಲಿನ ಅಧಿಕಾರಿಗಳು ವಿಜಿಟರ್ ಕೊಠಡಿಗೆ ಕರೆತಂದರು. ಸುಮಾರು ಅರ್ಧ ಗಂಟೆಗಳ ಕಾಲ ಕುಟುಂಬದೊಂದಿಗೆ ಮಾತನಾಡಿದ ನಟ ದರ್ಶನ್ ಮರಳಿ ಸೆಲ್‌ಗೆ ತೆರಳುವ ವೇಳೆ ಪತ್ನಿ ತಂದಿದ್ದ ಎರಡು ಬ್ಯಾಗ್‌ಗಳಲ್ಲಿದ್ದ ಡ್ರೈಫ್ರೂಟ್ಸ್, ಹಣ್ಣು, ತಿಂಡಿ ತಿನಿಸುಗಳನ್ನು, ಬಟ್ಟೆಗಳನ್ನು ತೆಗೆದುಕೊಂಡು ತೆರಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ಪೈಕಿ ಮೂವರಿಗೆ ಜಾಮೀನು ದೊರಕಿದೆ ಎಂದು ವಿಜಯಲಕ್ಷ್ಮಿ ಪತಿ ದರ್ಶನ್ ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಜಾಮೀನು ಸಿಗುವ ನಿರೀಕ್ಷೆಯಿದೆ. ಧೈರ್ಯದಿಂದ ಇರಿ. ಆರೋಗ್ಯದ ಕಡೆ ಗಮನ ನೀಡಿ. ಯಾವುದೇ ಯೋಚನೆ ಮಾಡಬೇಡಿ. ಖಿನ್ನತೆಗೆ ಒಳಗಾಗಬೇಡಿ ಎಂದು ಪತ್ನಿ ವಿಜಯಲಕ್ಷ್ಮಿ ಪತಿ ದರ್ಶನ್‌ಗೆ ಧೈರ್ಯ ತುಂಬಿದ್ದಾರೆ.ಇದೇ ವೇಳೆ ಜೈಲಿನ ಸಿಬ್ಬಂದಿ ತನ್ನ ಜೊತೆ ನಡೆದುಕೊಳ್ಳುವ ರೀತಿಯ ಬಗ್ಗೆ ದರ್ಶನ್ ಪತ್ನಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಡ್, ಚೇರ್, ದಿಂಬು ನೀಡುತ್ತಿಲ್ಲ. ಜೈಲಿನ ನಿಯಮದ ಪ್ರಕಾರ ವಿಚಾರಣಾಧೀನ ಕೈದಿಗೆ ನೀಡಬೇಕಾದ ಸೌಕರ್ಯಗಳನ್ನು ನೀಡುತ್ತಿಲ್ಲ ಎಂದು ಪತ್ನಿ ವಿಜಯಲಕ್ಷ್ಮಿ ಎದುರು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ವಕೀಲರೊಂದಿಗೆ ಚರ್ಚಿಸಲಾಗುವುದು ಎಂದು ಪತ್ನಿ ತಿಳಿಸಿದ್ದಾರೆ ಎನ್ನಲಾಗಿದೆ.
ಅನಾಮಧೇಯ ಪತ್ರಗಳ ಕಿರಿಕಿರಿ:ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹೆಸರಿನಲ್ಲಿ ಪ್ರತಿನಿತ್ಯ ಅನಾಮಧೇಯ ಅಭಿಮಾನಿಗಳಿಂದ ಪತ್ರಗಳು ಬರುತ್ತಿದ್ದು, ಇದು ಜೈಲು ಸಿಬ್ಬಂದಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ನಟ ದರ್ಶನ್‌ನನ್ನು ಭೇಟಿ ಮಾಡಲು ಅನೇಕ ಅಭಿಮಾನಿಗಳು ಜೈಲು ಬಳಿ ಬರುತ್ತಲೇ ಇದ್ದಾರೆ. ಆದರೆ, ಭೇಟಿಗೆ ಯಾರಿಗೂ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಪತ್ರಗಳನ್ನ ಬರೆಯುತ್ತಿದ್ದಾರೆ. ಈ ವಿಚಾರ ನಟ ದರ್ಶನ್‌ಗೆ ಜೈಲು ಸಿಬ್ಬಂದಿ ತಿಳಿಸಿದ್ದು, ವೈಯಕ್ತಿಕ ಪತ್ರಗಳಿದ್ದರೆ ಮಾತ್ರ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.