ಸಾರಾಂಶ
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಕುಟುಂಬದ ಸದಸ್ಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ತಾಯಿ ಮೀನಾ ತೂಗುದೀಪ ಮಗನನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟರು.
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯಾ ಹಾಗೂ ಭಾವ ಸೇರಿದಂತೆ ಕುಟುಂಬ ಸದಸ್ಯರು ಗುರುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಈಗಾಗಲೇ ನಾಲ್ಕು ಬಾರಿ ಜೈಲಿಗೆ ಭೇಟಿ ನೀಡಿದ್ದಾರೆ. ತಾಯಿ ಮೀನಾ ತೂಗುದೀಪ ಇದೇ ಮೊದಲ ಬಾರಿಗೆ ಮಗನ ಭೇಟಿಗಾಗಿ ಕಾರಾಗೃಹಕ್ಕೆ ಆಗಮಿಸಿದ್ದರು. ತನ್ನನ್ನು ಭೇಟಿ ಮಾಡಲು ತಾಯಿ ಆಗಮಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ನಟ ದರ್ಶನ್ ಖುಷಿಯಿಂದಲೇ ಹೈಸೆಕ್ಯೂರಿಟಿ ಸೆಲ್‌ನಿಂದ ವಿಜಿಟರ್ ಕೋಣೆ ಕಡೆ ಭದ್ರತಾ ಸಿಬ್ಬಂದಿಯೊಂದಿಗೆ ತೆರಳಿದರು. ಮಗನನ್ನು ನೋಡುತ್ತಿದ್ದಂತೆಯೇ ತಾಯಿ ಮೀನಾ ತೂಗುದೀಪ ಭಾವುಕರಾಗಿ ಕಣ್ಣೀರಿಟ್ಟರು. ತಾಯಿ ಭೇಟಿಗಾಗಿ ತವಕದಿಂದ ಕಾಯುತ್ತಿದ್ದ ನಟ ದರ್ಶನ್ ತಾಯಿಯನ್ನು ನೋಡುತ್ತಿದ್ದಂತೆಯೇ ಸಂತಸಗೊಂಡರು.ಅಲ್ಲದೆ, ತಾಯಿ ಕಾಲಿಗೆ ನಮಸ್ಕರಿಸಿದರು. ಮಗನ ಸ್ಥಿತಿ ಕಂಡು ಕಣ್ಣೀರಾಗಿದ್ದ ತಾಯಿಯನ್ನು ದರ್ಶನ್ ಸಮಾಧಾನಿಸಿದರು. ಅಕ್ಕ ದಿವ್ಯಾ, ಭಾವ ಮಂಜುನಾಥ್, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ನಟನ ಆರೋಗ್ಯ ವಿಚಾರಿಸಿದರು. ಸುಮಾರು 20 ನಿಮಿಷಗಳ ಕಾಲ ಕುಟುಂಬ ಸದಸ್ಯರೊಂದಿಗೆ ದರ್ಶನ್ ಮಾತನಾಡಿದರು.
ಇದೇ ವೇಳೆ ತಾಯಿ ತಂದಿದ್ದ ಬೇಕರಿ ತಿನಿಸುಗಳು, ಮನೆಯಿಂದ ಮಾಡಿಕೊಂಡು ಬಂದಿದ್ದ ತಿನಿಸು ಹಾಗೂ ಡ್ರೈಫ್ರೂರ್ಟ್ಸ್ ಗಳನ್ನು ದರ್ಶನ್ ಗೆ ನೀಡಿದರು.ಏತನ್ಮಧ್ಯೆ, ನಟ ದರ್ಶನ್ ವಿಚಾರಣಾಧೀನ ಕೈದಿಯಾಗಿರುವ ನನಗೆ ನಿಯಮ ಪ್ರಕಾರ ನೀಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ತಕಾರರು ತೆಗೆದಿದ್ದು, ಈ ಸಂಬಂಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟನ ಈ ನಡೆ ಜೈಲು ಅಧಿಕಾರಿಗಳಿಗೆ ನುಂಗದ ತುತ್ತಾಗಿದೆ.