ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಚಲನಚಿತ್ರ ನಟ ಧರ್ಮ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಧ್ವನಿ ಪರೀಕ್ಷೆಗೆ ಒಳಪಡಿಸಿದೆ.ಈ ಪರೀಕ್ಷೆ ಸಂಬಂಧ ನ್ಯಾಯಾಲಯದ ಅನುಮತಿಯನ್ನು ಸಿಐಡಿ ಪಡೆದಿತ್ತು. ಬಳಿಕ ನೋಟಿಸ್ ನೀಡಿ ಧರ್ಮ ಅವರ ಧ್ವನಿ ಮಾದರಿ (ಸ್ಯಾಂಪಲ್) ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ ಅಧಿಕಾರಿಗಳು ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಳಿಕ ವಂಚನೆ ಕೃತ್ಯದಲ್ಲಿ ಧರ್ಮ ಅವರು ಚಿನ್ನ ವ್ಯಾಪಾರಿ ಜತೆ ಡಿ,ಕೆ.ಸುರೇಶ್ ದನಿ ಅನುಕರಣೆ ಮಾಡಿದ್ದರೆ ಅಥವಾ ಇಲ್ಲವೇ ಎಂಬುದು ಖಚಿತವಾಗಲಿದೆ ಎಂದು ‘ಕನ್ನಡಪ್ರಭ’ಕ್ಕೆ ಮೂಲಗಳು ಮಾಹಿತಿ ನೀಡಿವೆ.
ಚಿನ್ನ ವ್ಯಾಪಾರಿಗೆ ಮಾಜಿ ಸಂಸದ ಸುರೇಶ್ ಸೋದರಿ ಎಂದು ಹೇಳಿಕೊಂಡು ಐಶ್ವರ್ಯಗೌಡ ಕೋಟ್ಯಂತರ ರುಪಾಯಿ ವಂಚಿಸಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣದಲ್ಲಿ ಐಶ್ವರ್ಯ ಅವರಿಗೆ ಧರ್ಮ ಸಹಕರಿಸಿದ್ದರು ಎಂದು ದೂರಲಾಗಿತ್ತು. ಅಂದು ಚಿನ್ನ ವ್ಯಾಪಾರಿ ವನಿತಾ ಅವರ ಜತೆ ಮೊಬೈಲ್ಲಿ ತಾವೇ ಸಂಸದ ಸುರೇಶ್ ಎಂದು ಧರ್ಮ ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆಡಿಯೋ ಸಹ ವೈರಲ್ ಆಗಿತ್ತು. ಈ ಆಡಿಯೋದಲ್ಲಿರುವ ದನಿಯ ಸಾಚಾತನಕ್ಕೆ ಧರ್ಮ ಅವರನ್ನು ಧ್ವನಿ ಪರೀಕ್ಷೆ ಸಿಐಡಿ ಒಳಪಡಿಸಿದೆ.