ಸಾರಾಂಶ
ಕೊಪ್ಪಳ:
ನಟ ಡಾ. ರಾಜ್‌ಕುಮಾರ್ ಕೇವಲ ಕಲಾವಿದರಾಗಿ ಹಾಗೂ ಕಲಾ ಅರಾಧಕರಾಗಿ ಉಳಿಯದೇ ಕನ್ನಡ ಭಾಷಾಭಿಮಾನ ಬೆಳೆಸಿದ್ದರು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ನಟ ಡಾ. ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕುಮಾರ ಅವರು ಆದರ್ಶ ವ್ಯಕ್ತಿಗಳಾಗಿದ್ದು ಭಾರತವಲ್ಲದೆ ಜಾಗತಿಕ ಮಟ್ಟದಲ್ಲಿ ಅರಣ್ಯಕ್ಕೆ ಸಂಬಂಧಿಸಿ ಮೊದಲ ಚಿತ್ರ ಮಾಡಿದವರಲ್ಲಿ ಮೊದಲಿಗರು. ಕೇವಲ ನಟರಾಗದೆ ಗೋಕಾಕ್ ಚಳವಳಿ ಮೂಲಕ ಇಡೀ ಚಿತ್ರರಂಗ ಹಾಗೂ ಸಾಹಿತಿಗಳ ಜತೆಗೆ ರಾಜ್ಯ ಸುತ್ತಿ ಕನ್ನಡ ಭಾಷಾಭಿಮಾನ ಬೆಳೆಸಿದ್ದರು ಎಂದರು.
ಕೆಲ ನಟರು ರಾಜಕಾರಣಕ್ಕೆ ಧುಮುಕಿದರೆ ರಾಜಕುಮಾರ ಅದರತ್ತ ಸುಳಿಯದೆ ಕಲಾವಿದರಾಗಿ ಕನ್ನಡಿಗರ ಮನದಲ್ಲಿ ಹಚ್ಚಳಿಯದೆ ಉಳಿದಿದ್ದಾರೆ. ಅನ್ಯ ಭಾಷೆಗಳಲ್ಲಿ ಅವಕಾಶ ಸಿಕ್ಕರೂ ಕನ್ನಡ ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದರು. ಅವರು, ಕನ್ನಡದ ಆಸ್ತಿ, ಶಕ್ತಿ, ಕನ್ನಡದ ಅಸ್ಮಿತೆಯಾಗಿದ್ದಾರೆ. ಅವರ ಕುಟುಂಬ ಚಿತ್ರರಂಗ ಮಾತ್ರವಲ್ಲದೆ ಸಾಮಾಜಿಕವಾಗಿಯೂ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ರಾಜಕುಮಾರ ಅವರು ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ತಮ್ಮದೇ ಛಾಪು ಮೂಡಿಸಿದ್ದರು. ನಾಟಕ ಕಂಪನಿಯಿಂದ ಹಿಡಿದು ಸಿನಿಮಾ ವರೆಗೆ ತಮ್ಮ ಪ್ರತಿಭೆ ತೋರಿಸಿ ಕನ್ನಡಾಭಿಮಾನದ ಸೇವೆ ಮಾಡಿದ್ದಾರೆ. ದಾರಿ ತಪ್ಪಿದ ಮಗ, ಬಡವರ ಬಂಧು, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿದಂತೆ ಅವರ ನಟಿಸಿದ ಹಲವಾರು ಚಿತ್ರಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ ಎಂದರು.
ಪುಷ್ಪನಮನ, ಸಂಗೀತ:ರಾಜ್‌ಕುಮಾರ್ ಜನ್ಮ ದಿನಾಚರಣೆ ನಿಮಿತ್ತ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ರಾಜಕುಮಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಮರ್ಪಿಸಿದರು. ಕಲಾವಿದ ಬಾಷು ಹಿರೇಮನಿ ಕಿನ್ನಾಳ ಹಾಗೂ ಚಂದನ ಭದ್ರಾವತಿ ರಾಜಕುಮಾರ ಅಭಿನಯದ ಗೀತೆ ಹಾಡಿದರು.
ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ನಾಗಮಣಿ, ಚುನಾವಣಾ ವಿಭಾಗದ ತಹಸೀಲ್ದಾರ್ ರವಿ ವಸ್ತ್ರದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ. ನಾಗರಾಜ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.