ಸಾರಾಂಶ
ತವರಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಕ್ಷಿತ್ ಶೆಟ್ಟಿ, ಅಲೆವೂರು ಭಾಗದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಕೆಲ ತಿಂಗಳ ಹಿಂದೆ ತಮ್ಮ ಮೂಲ ಮನೆಯ ದೈವದ ಆರಾಧನೆಯಲ್ಲೂ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡದ ಖ್ಯಾತ ನಟ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಮಂಗಳವಾರ ತನ್ನ ತವರೂರು ಅಲೆವೂರಿನಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿಯಾದರು.ಉಡುಪಿ ಸಮೀಪದ ಕುಕ್ಕಿಕಟ್ಟೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ, ತನ್ನ ಮೂಲ ಗ್ರಾಮವಾಗಿರುವ ಅಲೆವೂರಿನಲ್ಲಿ ಕೂರಿಸಲಾಗುವ ಕಟ್ಟೆ ಗಣಪತಿಯ ಹಬ್ಬದಲ್ಲಿ ಪ್ರತಿವರ್ಷ ತಪ್ಪದೇ ಭಾಗವಹಿಸುತ್ತಾರೆ. ಈ ಬಾರಿಯೂ ಅವರು ಈ ಗಣೇಶನ ಹಬ್ಬದಲ್ಲಿ ಭಾಗವಹಿಸಿದರು. ಮಂಗಳವಾರ ಊರಿಗೆ ಬಂದು ಗಣಪತಿಯ ದರ್ಶನಕ್ಕೆ ಬಂದಾಗ ನೂರಾರು ಜನ ಅಭಿಮಾನಿಗಳು ಮುಗಿಬಿದ್ದರು.ರಕ್ಷಿತ್ ಕಟ್ಟೆ ಗಣಪತಿಗೆ ಪೂಜೆ ಸಲ್ಲಿಸಿದರು. ಅರ್ಚಕರು ಪ್ರಾರ್ಥನೆ ನಡೆಸಿ, ಅವರ ಭವಿಷ್ಯಕ್ಕೆ ಶುಭ ಕೋರಿದರು. ಈ ಸಂದರ್ಭ ರಕ್ಷಿತ್ ಅವರು ಉಪಸ್ಥಿತರಿದ್ದ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.ಬಳಿಕ ತನ್ನ ಊರಿನ ಯುವಕರಿಗೆ ಸೆಲ್ಫಿಗೆ ಪೋಸು ಕೊಟ್ಟರು. ತವರಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಕ್ಷಿತ್ ಶೆಟ್ಟಿ, ಅಲೆವೂರು ಭಾಗದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಕೆಲ ತಿಂಗಳ ಹಿಂದೆ ತಮ್ಮ ಮೂಲ ಮನೆಯ ದೈವದ ಆರಾಧನೆಯಲ್ಲೂ ಭಾಗವಹಿಸಿದ್ದರು.