ಸಾರಾಂಶ
ದಾಬಸ್‍ಪೇಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೋಲದೇವನಹಳ್ಳಿ ಗ್ರಾಮದಲ್ಲಿ ನಟ ವಿನೋದ್‌ರಾಜ್ ಅವರು ತಮ್ಮ ತಾಯಿ ಡಾ.ಲೀಲಾವತಿಗೆ ದೇಗುಲ ನಿರ್ಮಿಸಿದ್ದು, ಗುರುವಾರ ಅದನ್ನು ಲೋಕಾರ್ಪಣೆಗೊಳಿಸಲಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ದೇಗುಲವನ್ನು ಲೋಕಾರ್ಪಣೆಗೊಳಿಸಿದರು. ತಾಯಿಯನ್ನೇ ದೇವತೆಯಾಗಿಸಿ ಲೀಲಾವತಿಯವರ ಸೇವೆ ಉಳಿಯುವಂತೆ ಮಾಡಿದ ವಿನೋದ್‍ರಾಜ್ ಅವರ ಜೊತೆ ಸರ್ಕಾರ ಸದಾ ಇರಲಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಠದ ಡಾ। ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಗ ತಾಯಿಗಾಗಿ ದೇಗುಲ ನಿರ್ಮಿಸಿದ್ದು, ತಾಯಿ ಮಗನ ಗಟ್ಟಿಯಾದ ಸಂಬಂಧಕ್ಕೆ ಶಕ್ತಿಯಾಗಿದೆ. ಮಗ ನಿರ್ಮಿಸಿದ ಲೀಲಾವತಿಯವರ ದೇಗುಲ ಕಲಾವಿದರಿಗೆ ಕಲಿಕೆಯ ಪಾಠಶಾಲೆಯಾಗಲಿದೆ. ಪ್ರಕೃತಿಯ ಮಡಿಲಿನಲ್ಲಿ ತಾಯಿಯ ಆಸೆಯಂತೆ ಬದುಕಿ ತಾಯಿಗಾಗಿ ದೇಗುಲವನ್ನು ನಿರ್ಮಿಸಿ, ಸಾರ್ಥಕ ಕೆಲಸ ಮಾಡಿದ್ದು ತಾಯಿ- ಮಗನ ಬಾಂಧವ್ಯದ ನೆನಪು ಶಾಶ್ವತವಾಗಿ ಉಳಿಯಲಿದೆ ಎಂದರು.
ಲೀಲಾವತಿಯವರ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಯಿತು. ಇದೇ ವೇಳೆ ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಉಮೇಶ್, ಲಕ್ಷ್ಮೀದೇವಿ, ಬ್ಯಾಂಕ್ ಜನಾರ್ಧನ್, ಗುರುಪ್ರಸಾದ್ ಪತ್ನಿ, ಶೈಲಶ್ರೀ ಸುದರ್ಶನ್, ಮುದ್ದುರಾಜ್ ಸೇರಿದಂತೆ ಅನೇಕರಿಗೆ ಆರ್ಥಿಕ ನೆರವು ನೀಡಿ ಸನ್ಮಾನಿಸಲಾಯಿತು.