ಸಾರಾಂಶ
ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ನಾಯಕಿ ವಿದ್ಯಾ (32) ಅವರನ್ನು ಆಕೆಯ ಪತಿಯೇ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜರುಗಿದೆ.
- ಕೌಟುಂಬಿಕ ಕಲಹ: ಸುತ್ತಿಗೆಯಿಂದ ಹೊಡೆದು ಕೊಂದ ಪತಿ
ಕನ್ನಡಪ್ರಭ ವಾರ್ತೆ ಬನ್ನೂರುಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ನಾಯಕಿ ವಿದ್ಯಾ (32) ಅವರನ್ನು ಆಕೆಯ ಪತಿಯೇ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜರುಗಿದೆ.
ತುರಗನೂರು ನಿವಾಸಿ ನಂದೀಶ್ ಆರೋಪಿ. ನಂದೀಶ್ ಮತ್ತು ವಿದ್ಯಾ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಒಂಭತ್ತು ವರ್ಷದ ಪುತ್ರ, 9 ತಿಂಗಳಿನ ಪುತ್ರಿ ಇದ್ದಾರೆ.ಕುಟುಂಬದ ಕಲಹದಿಂದ ಇಬ್ಬರು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ವರ್ಷ ಇಬ್ಬರೂ ರಾಜಿಯಾಗಿ ಸಂಸಾರ ನಡೆಸುತ್ತಿದ್ದು, ಈಗ 9 ತಿಂಗಳ ಹೆಣ್ಣು ಮಗು ಇದೆ. ಮೈಸೂರಿನ ಶ್ರೀರಾಂಪುರದಲ್ಲಿ ವಾಸವಿರುವ ವಿದ್ಯಾ ಈ ಹಿಂದೆ ಭಜರಂಗಿ, ವಜ್ರಕಾಯದಂಥ ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು. ಇದೀಗ ಕಾಂಗ್ರೆಸ್ ನಾಯಕಿಯಾಗಿ ರಾಜಕೀಯವಾಗಿ ಸಕ್ರಿಯರಾಗಿದ್ದರು.
ಸೋಮವಾರ ರಾತ್ರಿ ಈಕೆಯ ಪತಿ ನಂದೀಶ್ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದು, ಅದರಂತೆ ಮೈಸೂರಿನಿಂದ ಕಾರಿನಲ್ಲಿ ಬಂದ ಈಕೆಯ ಜೊತೆ ಮಾತುಕತೆ ನಡೆದಿದೆ. ಈ ವೇಳೆ ಇಬ್ಬರ ನಡುವೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ನಂತರ ಆಕೆಯನ್ನು ರೂಮಿಗೆ ಎಳೆದೊಯ್ದು ಪತಿ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ನಾಪತ್ತೆಯಾಗಿದ್ದು, ಈತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮೈಸೂರು ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ. ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.