ಜನಮಾನಸದಲ್ಲಿ ಉಳಿದ ಮೇರು ಅಭಿನೇತ್ರಿ ಲಕ್ಷ್ಮೀ

| Published : Mar 27 2024, 01:04 AM IST

ಸಾರಾಂಶ

ಪಂಚ ಭಾಷಾ ತಾರೆಯಾಗಿ ಸುದೀರ್ಘ ಕಾಲ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಮೇರು ಅಭಿನೇತ್ರಿ ಲಕ್ಷ್ಮೀ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಸಿ.ಕೆ.ಸುಬ್ಬರಾಯ ಹೇಳಿದರು.

ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಖ್ಯಾತ ನಟಿ ಲಕ್ಷ್ಮೀ ಅಭಿನಯದ ಚಿತ್ರಗೀತೆಗಳ ‘ಚಂದನದ ಗೊಂಬೆ’ ಗಾಯನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಂಚ ಭಾಷಾ ತಾರೆಯಾಗಿ ಸುದೀರ್ಘ ಕಾಲ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಮೇರು ಅಭಿನೇತ್ರಿ ಲಕ್ಷ್ಮೀ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಸಿ.ಕೆ.ಸುಬ್ಬರಾಯ ಹೇಳಿದರು.ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟಿ ಲಕ್ಷ್ಮೀ ಅಭಿನಯದ ಚಿತ್ರಗೀತೆಗಳ ‘ಚಂದನದ ಗೊಂಬೆ’ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಕ್ಷ್ಮೀ ಅವರು ತನ್ನ 17ನೇ ವರ್ಷಕ್ಕೆ ವಿವಾಹವಾಗಿ ಅನೇಕ ಏಳು ಬೀಳುಗಳ ನಡುವೆ 70-80 ರ ದಶಕದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅನೇಕ ಪ್ರತಿಭಾವಂತ ನಟರ ಜೊತೆಗೆ ನಟಿಸಿ ಅಪ್ರತಿಮ ಪ್ರತಿಭೆಯೊಂದಿಗೆ ತಮ್ಮ ಛಾಪು ಮೂಡಿಸಿದವರು. ಪ್ರತಿಭೆಯೊಂದಿದ್ದರೆ ಯಾರ ಸಹಾಯವೂ ಇಲ್ಲದೆ ಸಾಧನೆ ಮಾಡಬಹುದು ಎನ್ನುವ ಈ ನಟಿ ಅಂತೆಯೇ ನಿರೂಪಿಸಿದವರೂ ಆಗಿದ್ದಾರೆ. ಅಂಥ ಮೇರು ನಟಿಯ ಅಭಿನಯದ ಚಲನಚಿತ್ರ ಗೀತೆಗಳನ್ನು ಪೂರ್ವಿ ತಂಡ ಪ್ರಸ್ತುತಪಡಿಸುವ ಮೂಲಕ ಆ ನಟಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು. ಇದೀಗ ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಗುರುತಿಸಿಕೊಂಡಿರುವ ಈ ನಟಿ ತಮ್ಮ ತರ್ಕಬದ್ಧ ವಿಶ್ಲೇಷಣೆಗಳಿಂದ ಗಮನ ಸೆಳೆಯುತ್ತಿದ್ದಾರೆ ಎಂದ ಅವರು, ಹಿಂದೊಮ್ಮೆ ನಟ ರವಿಚಂದ್ರನ್‌ ಅವರ ಸಾಹೇಬ ಚಲನಚಿತ್ರ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಕಾಲೇಜಿಗೆ ಲಕ್ಷ್ಮಿ ಭೇಟಿ ನೀಡಿದ್ದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ ದೊಡ್ಡಯ್ಯ ಮಾತನಾಡಿ, ಲಕ್ಷ್ಮೀ ಓರ್ವ ಪ್ರತಿಭಾವಂತ ನಟಿ. ಸಿನಿಮಾರಂಗದ ಅಭಿನಯ ಕ್ಷೇತ್ರದಲ್ಲಿ ಅನೇಕರು ಬಂದು ಹೋಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ಜನರು ನೆನಪಿಟ್ಟು ಕೊಳ್ಳುತ್ತಾರೆ. ಅಂಥವರಲ್ಲಿ ಲಕ್ಷ್ಮೀ ಕೂಡ ಒಬ್ಬರು ಎಂದರು. ಎಂ.ಎಸ್.ಸುಧೀರ್ ನೇತೃತ್ವದಲ್ಲಿ 99ನೇ ಗಾನಯಾನ ಕಾರ್ಯಕ್ರಮ ನಡೆಸುತ್ತಿರುವ ಪೂರ್ವಿತಂಡ 100ನೇ ಗಾನ ಯಾನಕ್ಕೆ ಅಣಿಯಾಗುತ್ತಿದೆ. ಚುನಾವಣೆ ಮುಗಿದ ಬಳಿಕ ಜೂನ್ ತಿಂಗಳಲ್ಲಿ ಈ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ಹೇಳಿದರು.

ಗಾಯಕರಾದ ಎಂ.ಎಸ್.ಸುಧೀರ್, ರಾಯನಾಯಕ್, ದರ್ಶನ್, ಚೇತನ್‌ರಾಮ್, ಚೈತನ್ಯ, ಸುರೇಂದ್ರನಾಯ್ಕ್, ಕವಿತ ನಿಯತ್, ಪೂಜ್ಯ, ಪಂಚಮಿ, ಪ್ರಣಮ್ಯ, ಶ್ವೇತ ಭಾರದ್ವಾಜ್ ಹಾಗೂ ಪೃಥ್ವಿಶ್ರೀ ಅವರು ಲಕ್ಷ್ಮೀ ಅಭಿನಯದ ಚಲನಚಿತ್ರ ಗೀತೆಗಳನ್ನುಪ್ರಸ್ತುತಪಡಿಸಿ ರಂಜಿಸಿದರು.ಲಯನ್ಸ್ ಸಂಸ್ಥೆ ಸದಸ್ಯೆ ಶೋಭಾ ಗೋಪಿಕೃಷ್ಣ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಅಧ್ಯಕ್ಷ ಎಂ.ಎಸ್.ಸುಧೀರ್ , ಗಾಯಕ ರಾಯನಾಯಕ್ , ಸುಮಾ ಪ್ರಸಾದ್‌ ಭಾಗವಹಿಸಿದ್ದರು. 26 ಕೆಸಿಕೆಎಂ 1ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಪೂರ್ವಿ ಗಾನಯಾನ-99 ಕಾರ್ಯಕ್ರಮವನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಉದ್ಘಾಟಿಸಿದರು. ದೀಪಕ್‌ ದೊಡ್ಡಯ್ಯ, ಶೋಭಾ ಗೋಪಿಕೃಷ್ಣ, ಎಂ.ಎಸ್.ಸುಧೀರ್, ಸುಮಾ ಪ್ರಸಾದ್‌ ಇದ್ದರು.