ಕನ್ನಡಪ್ರಭ ವಾರ್ತೆ ಬೆಂಗಳೂರು

ನಟಿ ರುಕ್ಮಿಣಿವಸಂತ್‌ ಅವರು ಬಿಕಿನಿಯಲ್ಲಿ ಇರುವಂತೆ ನಕಲಿ ಫೋಟೋ ಮತ್ತು ವಿಡಿಯೋವನ್ನು ಸೃಷ್ಟಿಸಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸೈಬರ್ ಕಮಾಂಡ್‌ ಸೆಂಟರ್ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದ ನಿವಾಸಿ ರವಿಕುಮಾರ್ (24), ಶಿವಮೊಗ್ಗ ಮೂಲದ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಚಂದ್ರಕಾಂತ್ (33) ಮತ್ತು ಬೆಂಗಳೂರಿನ ನಾಗಸಂದ್ರ ಮಂಜುನಾಥನಗರ ನಿವಾಸಿ ರಂಜಿತ್ ಬಂಧಿತರು.

ನಟಿ ರುಕ್ಮಿಣಿವಸಂತ ಅವರು, ತಮ್ಮ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಸಂಬಂಧ ಇತ್ತೀಚೆಗೆ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಮೊಬೈಲ್‌ ಜಪ್ತಿ:


ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಐಡಿ, ಸೈಬರ್ ಕಮಾಂಡ್ ಸೆಂಟರ್‌ನ ಪೊಲೀಸ್ ಮಹಾನಿರ್ದೇಶಕ ಡಾ.ಪ್ರಣಬ್‌ ಮೊಹಂತಿ ಮಾರ್ಗದರ್ಶನದಲ್ಲಿ ಡಿಐಜಿಪಿ ಆನಂದ್‌ಕುಮಾರ್‌ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಪ್ರಕರಣ ವಿವರ:

ನಟಿ ರುಕ್ಮಿಣಿ ವಸಂತ್ ಅವರದ್ದು ಎನ್ನಲಾದ ಬಿಕಿನಿ ಫೋಟೋ ಮತ್ತು ವಿಡಿಯೋಗಳು ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ತಮ್ಮ ಮುಖವನ್ನು ಬೇರೊಬ್ಬರ ದೇಹಕ್ಕೆ ಜೋಡಿಸಿ ಈ ದೃಶ್ಯಗಳನ್ನು ಸೃಷ್ಟಿಸಲಾಗಿದೆ ಎಂದು ರುಕ್ಮಿಣಿ ವಸಂತ್‌ ಸ್ಪಷ್ಟಪಡಿಸಿದ್ದರು. ಬಳಿಕ ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.ಬಾಕ್ಸ್...

ಟೆಕ್ಕಿಯ ಕೈಚಳಕಬಂಧಿತ ಆರೋಪಿಗಳ ಪೈಕಿ ರಂಜಿತ್‌ ಬಿ.ಇ ಪದವೀಧರನಾಗಿದ್ದು, ಖಾಸಗಿ ಐ.ಟಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಈತನೇ ಎ.ಐ ತಂತ್ರಜ್ಞಾನ ಬಳಸಿ ಕಾಂತಾರ ನಟಿ ರುಕ್ಮಿಣಿ ವಂಸತ್‌ ಅವರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿದ್ದ. ಇದನ್ನು ಆರೋಪಿಗಳಾದ ಚಂದ್ರಕಾಂತ್‌ ಮತ್ತು ರವಿಕುಮಾರ್‌ ಸಾಮಾಜಿಕ ಜಾಣದಲ್ಲಿ ಹರಿಬಿಟ್ಟಿದ್ದರು. ಆರೋಪಿ ಚಂದ್ರಕಾಂತ್‌ ಸಿಎ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರೆ, ಆರೋಪಿ ರವಿಕುಮಾರ್‌ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.