ಈ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನ.1ರಂದು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ರಾಜು ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಈ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನ.1ರಂದು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ರಾಜು ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ನೆಹರು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ನಡೆಯಲಿವೆ ಎಂದರು.

ರಾಜ್ಯೋತ್ಸವದಲ್ಲಿ ನಾಡು ನುಡಿಯ ಶ್ರೀಮಂತಿಕೆ ಮತ್ತು ವೈಭವವನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. ಅಂದು ಬೆಳಗ್ಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‍ನಿಂದ ನೆಹರೂ ಮೈದಾನದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಾಡಿನ ಸಾಧನೆ, ಕಲೆ, ವೀರ ಪುರುಷರು, ಹೋರಾಟಗಾರರ ಸ್ಥಬ್ಧಚಿತ್ರಗಳನ್ನು ಮತ್ತು ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದರು.

ಎಲ್ಲ ಇಲಾಖೆಗಳು ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಉಪ ಪೊಲೀಸ್ ಆಯುಕ್ತ(ಸಿಎಆರ್) ಉಮೇಶ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

---