ಎಡಿಸಿ ಭರವಸೆ, ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ

| Published : Jun 27 2024, 01:01 AM IST

ಎಡಿಸಿ ಭರವಸೆ, ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಒಂದು ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಆರಂಭಿಸುವುದಾಗಿ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಪುರಸಭೆ ಆವರಣದಲ್ಲಿ ಫಲಾನುಭವಿಗಳು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆದರು.

ಬ್ಯಾಡಗಿ: ಮುಂದಿನ ಒಂದು ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಆರಂಭಿಸುವುದಾಗಿ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಪುರಸಭೆ ಆವರಣದಲ್ಲಿ ಫಲಾನುಭವಿಗಳು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆದರು.

ಪುರಸಭೆ ನಿರಾಶ್ರಿತರ ಸಮಸ್ಯೆ ಕುರಿತು ಮುಖ್ಯಾಧಿಕಾರಿಗಳಿಂದ ಸಂಪೂರ್ಣ ದಾಖಲೆಗಳ ಮಾಹಿತಿ ಪಡೆದಿರುವೆ, ಜಿಪ್ಲಸ್ ಮನೆ ಅಥವಾ ನಿವೇಶನ ನೀಡಬೇಕು ಎನ್ನುವ ಕುರಿತು ಇನ್ನೂ ನಿರ್ಧರಿಸಿಲ್ಲ, ಹಿಂದಿನ 633 ಅರ್ಹರ ಪಟ್ಟಿಯನ್ನು ಪುನಃ ಪರಿಶೀಲಿಸಿ ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಲಾಗುವುದು. ಸಭೆಯಲ್ಲಿ ಮುಖ್ಯಾಧಿಕಾರಿಗಳು, ಆಶ್ರಯ ಮನೆ ಹೋರಾಟ ಸಮಿತಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಎಲ್ಲರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ಜು.4ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ: ಬಡವರ ಸಮಸ್ಯೆ ನಮಗೂ ಅರ್ಥವಾಗಿದೆ. ತಾಂತ್ರಿಕ ಕಾರಣಗಳಿಂದ ಈ ಹಂತದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸ್ಥಳೀಯ ಪುರಸಭೆಯಲ್ಲಿ ಇನ್ನೂ ಆಶ್ರಯ ಸಮಿತಿ ರಚನೆಯಾಗಿಲ್ಲ. ಹೀಗಾಗಿ ನಿವೇಶನ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ ಅವರು, ಇದಕ್ಕಾಗಿ ಜು.4ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯನ್ನು ಆಯೋಜಿಸುವುದಾಗಿ ತಿಳಿಸಿದರು.

ಅರ್ಹ ಬಡವರಿಗೆ ನ್ಯಾಯ ಒದಗಿಸಿ: ಹೋರಾಟ ಸಮಿತಿ ಸಂಚಾಲಕ ಪಾಂಡುರಂಗ ಸುತಾರ ಮಾತನಾಡಿ, 15 ವರ್ಷಗಳಿಂದ ಬಡವರು ನಿವೇಶನಕ್ಕೆ ಹೋರಾಡುತ್ತಿದ್ದು, 10 ಎಕರೆ ಮಲ್ಲೂರ ರಸ್ತೆಯ ನಿವೇಶನ ಭೂಮಿ ಹಾಗೂ ಆಶ್ರಯ ಪ್ಲಾಟ್‌ನಲ್ಲಿ ಖಾಲಿಯಿರುವ ಜಾಗೆಗಳನ್ನು ಗುರ್ತಿಸಿ ಅರ್ಹರಿಗೆ ಹಂಚಿಕೆ ಮಾಡಲಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜು.4ರಂದು ಸಭೆ ನಡೆಸಲು ನಿರ್ಧರಿಸಿದ್ದು ಸ್ವಾಗತಾರ್ಹ. ನಿಮ್ಮ ಭರವಸೆಯಿಂದ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ತಿಳಿಸಿದರು.

ಹಣ ಮರಳಿಸಲು ಬದ್ಧ: ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಜಿ ಪ್ಲಸ್ ಮಾದರಿ ಆಶ್ರಯ ಮನೆ ಪಡೆಯಲು 580 ಮಹಿಳೆಯರು ಫಲಾನುಭವಿಗಳು ತುಂಬಿದ 1.74 ಕೋಟಿ ರು. ಹಣ ವಾಪಸ್‌ ನೀಡಲಾಗುವುದಲ್ಲದೇ ಬಡವರು ತಮ್ಮ ಹಣಕ್ಕೆ ಆತಂಕಪಡುವ ಅಗತ್ಯವಿಲ್ಲ, ಒಂದು ವೇಳೆ ಸರ್ಕಾರ ಉಚಿತವಾಗಿ ನಿವೇಶನ ವಿತರಿಸಿದಲ್ಲಿ ಫಲಾನುಭವಿಗಳಿಂದ ಪಡೆದ ವಂತಿಕೆ ಹಣ ಮರಳಿಸುವ ಭರವಸೆ ನೀಡಿದರು. ಈ ವೇಳೆ ಹಾವೇರಿ ಉಪವಿಭಾಗಾಧಿಕಾರಿ ಎಚ್.ಚನ್ನಪ್ಪ, ಜಿಲ್ಲಾ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಆಶ್ರಯ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ಸಂಚಾಲಕಿ ಫರೀದಾಭಾನು ನದೀಮುಲ್ಲಾ, ಮಂಜುಳಾ ಬಂಡಿವಡ್ಡರ, ಪಾರವ್ವ ಮಡಿವಾಳರ, ಗುಡ್ಡಪ್ಪ ಆಡಿನವರ ಇದ್ದರು.