ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಬ್ರಿಟಿಷರ ಆಳ್ವಿಕೆಯಿಂದ ದೇಶದ ವಿಮುಕ್ತಿಗಾಗಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಅಪ್ರತಿಮ ಸಾಹಸ ಮೆರೆದು ಹೋರಾಡಿದ, ಮಹಾನ್ ದೇಶಪ್ರೇಮಿ ನಾಯಕ ಸಂಗೂರು ಕರಿಯಪ್ಪ ಅವರ ಜೀವನಗಾಥೆಯನ್ನು ರಾಜ್ಯ ಸರ್ಕಾರ ಕೂಡಲೇ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದರು.ಸಂಗೂರು ಕರಿಯಪ್ಪ ಜಯಂತಿ ನಿಮಿತ್ತವಾಗಿ ಡಿವೈಎಫ್ಐ, ಎಸ್ಎಫ್ಐ ವತಿಯಿಂದ ಶನಿವಾರ ನಗರದ ಕೆ.ಇ.ಬಿ ಎದುರುಗಡೆ ಇರುವ ಸ್ವಾತಂತ್ರ್ಯ ಸೇನಾನಿ ಕರಿಯಪ್ಪ ಅವರ ಪುತ್ಥಳಿಗೆ ಪುಷ್ಪಾರ್ಪಣೆಗೈದು ಗೌರವ ನಮನ ಸಲ್ಲಿಸಿ ಮಾತನಾಡಿದರು.
ಸಾಮ್ರಾಜ್ಯಶಾಹಿ ಬ್ರಿಟಿಷರ ಹಿಡಿತದಿಂದ ಭಾರತದ ವಿಮೋಚನೆಗಾಗಿ ಗಾಂಧಿವಾದಿಯಾಗಿದ್ದುಕೊಂಡು ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುವಾಗಲೇ ಬಾಂಬ್ ಸ್ಪೋಟಗೊಂಡ ಪರಿಣಾಮವಾಗಿ ತಮ್ಮ ಬಲಗೈ ಮುಂಗೈ ಕಳೆದುಕೊಂಡರೂ ಹೋರಾಟ ಕಣದಲ್ಲಿ ಜಗ್ಗದೆ ಮುನ್ನುಗ್ಗಿದವರು. ಸಂಗೂರು ಕರಿಯಪ್ಪನವರ ಈ ರೋಮಾಂಚಕಾರಿ ಸಾಹಸಗಾಥೆಯನ್ನು ದೇಶದ ಜನತೆ ಅರಿಯಬೇಕಿದೆ ಎಂದರು.ಕರಿಯಪ್ಪ ಹಾಗೂ ವೀರಮ್ಮ ದಂಪತಿಗಳ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು, ಹಾವೇರಿ ಬಸ್ ನಿಲ್ದಾಣಕ್ಕೆ ಸಂಗೂರು ಕರಿಯಪ್ಪ ಅವರ ಹೆಸರನ್ನು ನಾಮಕರಣ ಮಾಡುವಂತೆ, ಸಂಗೂರಿನಲ್ಲಿರುವ ಗಾಂಧಿಜಿ ಚಿತಾಭಸ್ಮ ಸ್ಮಾರಕವನ್ನು ಹಾಗೂ ಕರಿಯಪ್ಪ ಅವರ ಪ್ರತಿಮೆ ಇರುವ ಜಾಗೆಯನ್ನು ವಿದುರಾಶ್ವತ್ಥ ಮಾದರಿಯಲ್ಲಿ ಸ್ಮಾರಕಭವನ, ಮ್ಯೂಜಿಯಂ ನಿರ್ಮಿಸಲು ಒತ್ತಾಯಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಕೊಟ್ಟರೂ ಪರಿಗಣಿಸದಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುತ್ತಿರುವ ಅವಮಾನವಲ್ಲದೇ ಮತ್ತೇನು? ಸರ್ಕಾರ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧೀಜಿಯವರ ಸಲಹೆಯಂತೆ, ಅವರ ಸಾಕು ಮಗಳಾದ ವೀರಮ್ಮನವರನ್ನು ಸ್ವತಂತ್ರ ಚಳುವಳಿಯ ಸಂದರ್ಭದಲ್ಲೇ "ಅಂತರ್ಜಾತಿ ಮದುವೆ " ಯಾಗಿ ಮಾದರಿ ಜೀವನ ನಡೆಸಿದರು. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಮಾಜದಲ್ಲಿ ಬಹಳಷ್ಟು ನೋವು, ಅವಮಾನ ಹಾಗೂ ದಬ್ವಾಳಿಕೆಯನ್ನು ಎದುರಿಸಬೇಕಾಯಿತು. ಕರಿಯಪ್ಪನವರ ಹೋರಾಟ ಜೀವನದಲ್ಲಿ ವೀರಮ್ಮನವರ ಪಾತ್ರ ತುಂಬಾ ಮಹತ್ವದ್ದು. ಇಬ್ಬರೂ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡ ಆದರ್ಶ ಮಹನೀಯ ದಂಪತಿಗಳು ಎಂದರು.ಮಹಾನ್ ಸಾಧಕರಾದ ಕರಿಯಪ್ಪ ಅವರ ಜನುಮದಿನದಂದು ಜಿಲ್ಲಾಡಳಿತ ಹಾಗೂ ಸ್ಥಳೀಯ ನಗರಸಭೆ ಆಡಳಿತ ಕನಿಷ್ಠ ಗೌರವ ಸಲ್ಲಿಸದಿರುವುದು ಖೇದಕರ. ದೇಶವನ್ನು ಕಟ್ಟಿದ ಮಹಾನ್ ವ್ಯಕ್ತಿತ್ವಗಳನ್ನು ಅವಗಣನೆ ಮಾಡುತ್ತಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡರಾದ ಅರುಣ ಕಡಕೋಳ, ಕೆಎಚ್‌ಪಿಟಿ ಸಂಸ್ಥೆಯ ತಾಲೂಕು ಸಂಯೋಜಕಿ ರೇಣುಕಾ ಕಹಾರ, ಡಿವೈಎಫ್ಐ ತಾಲೂಕು ಮುಖಂಡರಾದ ಸ್ವಾತಿ ಕಹಾರ ಉಪಸ್ಥಿತರಿದ್ದರು.