ಸಾರಾಂಶ
ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನ ಬದಲು ಮಾಡುವ ವಿಷಯ ಸೇರಿಸುತ್ತಾ? ಈ ಕುರಿತು ಬಹಿರಂಗವಾಗಿ ಬಿಜೆಪಿ ಸ್ಪಷ್ಟಪಡಿಸಬೇಕು.
ಧಾರವಾಡ:
ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನ ಬದಲು ಮಾಡುವ ವಿಷಯ ಸೇರಿಸುತ್ತಾ? ಈ ಕುರಿತು ಬಹಿರಂಗವಾಗಿ ಬಿಜೆಪಿ ಸ್ಪಷ್ಟಪಡಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಸಂವಿಧಾನ ಬದಲು ಮಾಡುವುದರ ಬಗ್ಗೆ ಸ್ಪಷ್ಟಪಡಿಸಬೇಕು. ಒಬ್ಬೊಬ್ಬರ ಕಡೆಯಿಂದ ಅದನ್ನು ಹೇಳಿಸುತ್ತಿದ್ದಾರೆ. ಅಧಿಕೃತವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದರ ಬಗ್ಗೆ ಹೇಳಬೇಕು. ಮುಂದೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆಯೇ? ಸಂವಿಧಾನದಲ್ಲಿ ಏನೇನು ಹೊಸದನ್ನು ತರುತ್ತಾರೆ ಎಂಬುದನ್ನು ಮಾಧ್ಯಮಗಳು ಜೋಶಿ ಅವರನ್ನು ಪ್ರಶ್ನಿಸಬೇಕೆಂದರು.
ಸಂವಿಧಾನ ಬದಲಿಗೆ ಅವಕಾಶ ಇದೆಯಾ ಎಂಬುದನ್ನು ಬಿಜೆಪಿ ಹೇಳಬೇಕಿದೆ. ಶೋಷಿತ ವರ್ಗದ ಜನ ಬದುಕಿರುವ ವರೆಗೂ ಸಂವಿಧಾನ ಬದಲಿಸಲು ಆಗದು ಎಂದ ಸಚಿವರು, ದೇಶದಲ್ಲಿ ಶೋಷಿತ ವರ್ಗದ ನಾವು ಇರುವವರೆಗೂ ಅದು ಅಸಾಧ್ಯ. ಸಂವಿಧಾನ ಬದಲಿಸುವ ಹೇಳಿಕೆಯನ್ನು ದೇಶದ ಯುವ ಜನತೆ ಗಮನಿಸಬೇಕು. ಬಿಜೆಪಿ ಈ ಕೂಡಲೇ ಅನಂತ ಕುಮಾರ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಇಲ್ಲವೇ ಅವರ ಹೇಳಿಕೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು. ಹೆಗಡೆ ಜೊತೆ ವೇದಿಕೆ ಹಂಚಿಕೊಳ್ಳುವುದನ್ನು ಬಿಜೆಪಿ ಮುಖಂಡರು ನಿಲ್ಲಿಸಬೇಕು ಎಂದರು.ಬೆಲ್ಲದರಿಂದಲೂ ತೀವ್ರ ವಿರೋಧ:
ಇನ್ನು, ಸಂಸದ ಅನಂತಕುಮಾರ ಅವರ ಸಂವಿಧಾನದ ಕುರಿತು ಹೇಳಿಕೆಗೆ ಸ್ವಪಕ್ಷೀಯರಿಂದಲೇ ಖಂಡನೆ ವ್ಯಕ್ತವಾಗಿದೆ. ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಖಂಡನೆ ವ್ಯಕ್ತಪಡಿಸಿದ್ದು, ಅನಂತಕುಮಾರ ಹೆಗಡೆಯವರು ಜನರ ಸಮಸ್ಯೆ, ತೊಂದರೆ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಸಂಬಂಧ-ಸೂತ್ರವಿಲ್ಲದ್ದನ್ನು ಮಾತನಾಡುತ್ತಾರೆ. ಇದರಿಂದ ಜನರ ಭಾವನೆಗೆ ಬಹಳ ಧಕ್ಕೆಯಾಗುತ್ತದೆ. ಇದರಿಂದ ಪಕ್ಷಕ್ಕೂ ಧಕ್ಕೆಯಾಗುತ್ತದೆ. ಸಂವಿಧಾನದಿಂದ ಜಾತ್ಯತೀತ ಎಂಬ ಪದವನ್ನು ತೆಗೆಯಬೇಕು ಎಂದಿದ್ದಾರೆ.ಅದು ಅನವಶ್ಯಕ. ಈ ಸಂದರ್ಭದಲ್ಲಿ ಮಾತನಾಡುವಂಥದ್ದಲ್ಲ. ಅದರ ಬಗ್ಗೆ ಚರ್ಚೆಯಾಗಬೇಕಾ? ಬೇಡವೇ? ಎನ್ನುವುದು ಈಗ ಸರಿಯಲ್ಲ. ಈ ರೀತಿ ಅನವಶ್ಯಕ ಹೇಳಿಕೆ ಕೊಡಬಾರದು. ಅವರು ಈ ಕುರಿತಾಗಿ ಕ್ಷಮೆ ಕೇಳಬೇಕು ಎಂದು ಬೆಲ್ಲದ ಹೇಳಿದರು.