ಕನ್ನಡಪ್ರಭ ವಾರ್ತೆ ಕಾರವಾರ

ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾಧೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 18(1) ಅಡಿಯಲ್ಲಿನ 5 ಪ್ರಕರಣ ಮತ್ತು 28ಬಿ ಅಡಿಯಲ್ಲಿನ 112 ಪ್ರಕರಣಗಳಿಗೆ ಒಟ್ಟು ₹27.70 ಕೋಟಿ ಹೆಚ್ಚುವರಿ ಪರಿಹಾರ ಬಿಡುಗಡೆಗೊಳಿಸಿದ್ದು, ಇವುಗಳಲ್ಲಿ ಅಗತ್ಯ ದಾಖಲೆ ಒದಗಿಸಿದ 35 ಪ್ರಕರಣಗಳಲ್ಲಿನ ಫಲಾನುಭವಿಗಳಿಗೆ ₹6.87 ಕೋಟಿ ಪರಿಹಾರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.ನಂತರ ಮಾತನಾಡಿದ ಅವರು, ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾಧೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಪರಿಹಾರದ ಮೊತ್ತವನ್ನು ಪಾವತಿಗೆ ಇರುವ ಸಮಸ್ಯೆಗಳ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದ್ದು, ಅದರಂತೆ ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ಸಚಿವರು ನೇಮಕ ಮಾಡಿದ ನಂತರ ಪರಿಹರದ ಮೊತ್ತ ಬಿಡುಗಡೆ ಕಾರ್ಯ ಶೀಘ್ರಗೊಂಡಿದ್ದು, ಇದುವರೆಗೆ ₹35 ಕೋಟಿ ಬಿಡುಗಡೆಗೊಂಡಿದೆ. ಬಾಕಿ ಉಳಿದಿರುವ 215 ಪ್ರಕರಣಗಳಿಗೆ ಬಿಡುಗಡೆಯಾಗಬೇಕಾದ ₹28.82 ಕೋಟಿ ಮೊತ್ತ ಕೂಡಾ ತ್ವರಿತಗತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲಸಗಳು ಉತ್ತಮವಾಗಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 52ರ ಹೊಸಳ್ಳಿಯಿಂದ ಯಲ್ಲಾಪುರ ಹಾಗೂ ಮಾಸ್ತಿಕಟ್ಟೆಯಿಂದ ಬಾಳೆಗುಳಿ ವರೆಗಿನ ರಸ್ತೆ ಅಭಿವೃದ್ದಿಗೆ ₹101 ಕೋಟಿ ಅನುದಾನ ಮಂಜೂರಾಗಿದೆ. ಕೊಂಕಣ ರೈಲ್ವೆಯಲ್ಲಿ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳ ಕುರಿತು ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ ಎಂದ ಅವರು, ಪ್ರಸ್ತುತ ಸೀಬರ್ಡ್ ಸಂತ್ರಸ್ತರು ತಮಗೆ ದೊರೆತಿರುವ ಪರಿಹಾರದ ಮೊತ್ತವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಸೀಬರ್ಡ್ ಯೋಜನೆಗಾಗಿ ಒಟ್ಟು 2400 ಎಕರೆ ಖಾಸಗಿ ಜಮೀನನ್ನು ಮತ್ತು 7000 ಎಕರೆ ಅರಣ್ಯ ಜಮೀನನ್ನು ಸ್ವಾಧೀನಪಡಿಸಕೊಳ್ಳಲಾಗಿದ್ದು, ಸಂತ್ರಸ್ತರಿಗೆ ಪರಿಹಾರ ಪಾವತಿ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ದಾಖಲಾದ ಪ್ರಕರಣಗಳಿಗೆ ಹೆಚ್ಚುವರಿ ಪರಿಹಾರ ವಿತರಿಸಲಾಗುತ್ತಿದ್ದು, ಇದುವರೆಗೆ ಒಟ್ಟು ₹647.58 ಕೋಟಿ ಪರಿಹಾರ ಡಿಫೆನ್ಸ್ ಎಸ್ಟೇಟ್ ಆಫೀಸರ್ ಬೆಂಗಳೂರು ಅವರಿಂದ ಬಿಡುಗಡೆಯಾಗಿದೆ ಎಂದರು.ಜಿಲ್ಲೆಯ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ಒದಗಿಸುವ ಕಾರ್ಯಗಳನ್ನು ಜಿಲ್ಲಾಡಳಿತ ಆದ್ಯತೆಯಲ್ಲಿ ಮಾಡುತ್ತಿದ್ದು, ಸಂತ್ರಸ್ತರು ಸೂಕ್ತ ದಾಖಲೆಗಳನ್ನು ತ್ವರಿತವಾಗಿ ನೀಡಿದಲ್ಲಿ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿ ವಿತರಿಸಲು ಸಾಧ್ಯವಾಗಲಿದೆ. ಪರಿಹಾರ ಪಡೆಯುವಲ್ಲಿ ವಿವಾದಗಳಿದ್ದಲ್ಲಿ ಈ ಪ್ರಕರಣದ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಲಾಗುತ್ತಿದೆ ಎಂದ ಅವರು, ಕೊಂಕಣ ರೈಲ್ವೆ ಸಂತ್ರಸ್ತರ ಭೂ ಸ್ವಾಧೀನ ಕುರಿತ ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಶೀಘ್ರದಲ್ಲಿ ಪರಿಹಾರದ ಮೊತ್ತವನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿಪಂ ಸಿಇಒ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸಹಾಯಕ ಆಯುಕ್ತ ಶ್ರವಣ ಕುಮಾರ್, ತರಬೇತಿ ನಿರತ ಐಎಎಸ್ ಅಧಿಕಾರಿ ಝೂಪಿಶಾನ್ ಹಕ್ ಇದ್ದರು.ಭೂ ಸ್ವಾಧೀನ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆನ್ ಲೈನ್ ಮೂಲಕ ಪರಿಹಾರದ ಮೊತ್ತವನ್ನು ಜಮೆ ಮಾಡಲಾಯಿತು.