ಮಕ್ಕಳ ಶಿಕ್ಷಣದ ಆದ್ಯತೆಗೆ ಹೆಚ್ಚುವರಿ ಕೊಠಡಿ: ಶಾಸಕ ಕೆ ಎಸ್.ಆನಂದ್

| Published : May 13 2025, 11:45 PM IST / Updated: May 13 2025, 11:46 PM IST

ಮಕ್ಕಳ ಶಿಕ್ಷಣದ ಆದ್ಯತೆಗೆ ಹೆಚ್ಚುವರಿ ಕೊಠಡಿ: ಶಾಸಕ ಕೆ ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಭೂಮಿಪೂಜೆ ಮಾಡುತ್ತಿದ್ದೇವೆ ಎಂದು ಶಾಸಕ ಕೆ ಎಸ್.ಆನಂದ್ ಹೇಳಿದರು.

ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ । 5 ಕೋಟಿ ರು. ವೆಚ್ಚ

ಕನ್ನಡಪ್ರಭ ವಾರ್ತೆ ಕಡೂರು.

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಭೂಮಿಪೂಜೆ ಮಾಡುತ್ತಿದ್ದೇವೆ ಎಂದು ಶಾಸಕ ಕೆ ಎಸ್.ಆನಂದ್ ಹೇಳಿದರು.

ತಾಲೂಕಿನ ಗೆದ್ಲೆಹಳ್ಳಿ ಬಳಿ ಇರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ 5 ಕೋಟಿ ರು. ವೆಚ್ಚದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈ ಬಾರಿ ಪಿಯುಸಿ ವಿಭಾಗವು ಆರಂಭವಾಗುತ್ತಿರುವ ಕಾರಣದಿಂದ 12 ಬೋಧನಾ ಕೊಠಡಿಗಳು, ಉಳಿದ ಕೊಠಡಿಗಳನ್ನು ಬಾಲಕ- ಬಾಲಕಿಯರ ಹಾಸ್ಟೆಲ್‌ಗೆ ಬಳಕೆ ಮಾಡಿಕೊಳ್ಳಲಾಗುವುದು. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ವಸತಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ವ್ಯವಸ್ಥೆ ಇದೆ. ಅಲ್ಲದೆ ಇದಕ್ಕೆ ಕೌನ್ಸಲಿಂಗ್ ಮೂಲಕ ಮಾತ್ರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ನಮ್ಮ ಸರ್ಕಾರದ ವಸತಿ ಶಾಲೆಯ ಮಕ್ಕಳು ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಉನ್ನತ ಮಟ್ಟದ ಫಲಿತಾಂಶ ತರುತ್ತಿರುವುದು ಸಂತೋಷದ ಸಂಗತಿ ಹಾಗಾಗಿ ಮೊರಾರ್ಜಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ವರ್ಷ ಬೀರೂರು ಹೋಬಳಿಯಲ್ಲಿ ಹೊಸದಾಗಿ ಮೊರಾರ್ಜಿ ವಸತಿ ಶಾಲೆ ಮಂಜೂರು ಮಾಡಿಸಲಾಗಿದೆ. ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ಈ ಶಾಲೆ ಆರಂಭಗೊಳ್ಳಲಿದೆ. ಈ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲೂ ಉತ್ತಮ ಫಲಿತಾಂಶ ಬರುತ್ತಿದೆ. ಜತೆಯಲ್ಲಿ ಒಳ್ಳೆಯ ವಾತಾವರಣದಲ್ಲಿ ನಿರ್ಮಾಣ ಆಗಿರುವ ಕಾರಣ ಮಕ್ಕಳ ಅಧ್ಯಯನಕ್ಕೆ ಉತ್ತಮ ಪರಿಸರ ಇದೆ ಎಂದರು.

ಈಗಾಗಲೇ 6 ರಿಂದ 10 ನೇ ತರಗತಿ ಇದ್ದು, ಇದೀಗ ಪ್ರಥಮ ಪಿಯುಸಿ ಆರಂಭವಾಗುತ್ತಿದೆ. ಇದು ಉತ್ತಮ ಶೈಕ್ಷಣಿಕ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಈ 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ ಕೊಠಡಿಗಳ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ, ನಿಗದಿತ ಸಮಯದೊಳಗೆ ಶಾಲೆಯ ಉಪಯೋಗಕ್ಕೆ ಬಿಟ್ಟುಕೊಡುವಂತೆ ಹೇಳಿದರು.

ಪ್ರಾಸ್ತಾವಿಕವಾಗಿ ಅಲ್ಪಸಂಖ್ಯಾತರ ವಸತಿ ಶಾಲೆಯ ಪ್ರಾಂಶುಪಾಲರಾದ ಮಂಜುಳಾ ಮಾತನಾಡಿ, 2025-26ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ ಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಾಸಕರು 5 ಕೋಟಿ ರೂ ಅನುದಾನ ತರುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆಯ ಹಿರಿಯ ಸದಸ್ಯ ತೋಟದ ಮನೆ ಮೋಹನ್, ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಅಧಿಕಾರಿ ಪ್ರವೀಣ್ ಕುಮಾರ್‌, ಮುಖಂಡರಾದ ವಸಂತ್,ರೇಣುಕಾಪ್ರಸಾದ್, ಬಸವರಾಜ್, ಶೇಖರಪ್ಪ, ಸತ್ಯ ಮತ್ತಿತರರು ಇದ್ದರು.