ವೈದ್ಯರಿಗೆ ಹೆಚ್ಚುವರಿ ಭದ್ರತೆ: ಸಚಿವ ಪಾಟೀಲ್‌ ಭರವಸೆ

| Published : Aug 28 2024, 01:32 AM IST

ಸಾರಾಂಶ

ವೈದ್ಯರ ಮೇಲಿನ ಹಲ್ಲೆ ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರವಣ ಪ್ರಕಾಶ ಪಾಟೀಲ ಅವರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈದ್ಯಕೀಯ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನುರಿತ ಭದ್ರತಾ ಸಿಬ್ಬಂದಿ ನಿಯೋಜನೆ, ಬೀದಿ ದೀಪ, ಸಿಸಿಟೀವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ವೈದ್ಯರಿಗೆ ಭದ್ರತೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಭರವಸೆ ನೀಡಿದರು.

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವೈದ್ಯೆಯರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋಲ್ಕತಾ ಘಟನೆ ಹಿನ್ನೆಲೆಯಲ್ಲಿ ವೈದ್ಯೆಯರ ಜೊತೆ ಸಮಾಲೋಚನೆ ನಡೆಸಿ ಅಹವಾಲು ಆಲಿಸಿದ್ದೇನೆ. ಸಿಸಿ ಟಿವಿ ಹೆಚ್ಚಳ, ವಯಸ್ಸಾದ ಸೆಕ್ಯುರಿಟಿಗಳ ಬದಲಾವಣೆ ಸೇರಿದಂತೆ ಹಲವು ಬೇಡಿಕೆಗಳು ಸಭೆಯಲ್ಲಿ ಕೇಳಿ ಬಂದಿದ್ದು ಶೀಘ್ರದಲ್ಲೇ ಈಡೇರಿಸಲಾಗುವುದು. ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರ ಸಮಸ್ಯೆ ಬಗ್ಗೆ ಶೀಘ್ರವೇ ಸಮಾಲೋಚನೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರಾಜಿ ಪ್ರಶ್ನೆಯೇ ಇಲ್ಲ

ವೈದ್ಯಕೀಯ ವೃತ್ತಿಪರರನ್ನು, ವಿಶೇಷವಾಗಿ ಮಹಿಳೆಯರನ್ನು ರಕ್ಷಿಸಲು ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ವೈದ್ಯ ಸಿಬ್ಬಂದಿಯ ವಸತಿ ನಿಲಯಗಳ ಸುರಕ್ಷತೆಗೂ ಆದ್ಯತೆ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆಯಡಿ ಆಂತರಿಕ ದೂರುಗಳ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ಸಮಿತಿಗಳ ಎದುರು ಮಹಿಳೆಯರು ಹೇಳಿಕೊಳ್ಳುವ ಎಲ್ಲಾ ಸಮಸ್ಯೆಗಳನ್ನು ಕಟ್ಟುನಿಟ್ಟಾಗಿ ಪರಿಹರಿಸಲಾಗುತ್ತದೆ. ಲೈಂಗಿಕ ದೌರ್ಜನ್ಯದಂತಹ ಅಪರಾಧಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.ಭದ್ರತೆ ಹೆಚ್ಚಿಸಲು ಮನವಿ

ವಯಸ್ಸಾದ ಸೆಕ್ಯೂರಿಟಿಗಳ ಬದಲಾವಣೆ, ಸಿಸಿಟೀವಿ ಹೆಚ್ಚಳ ಮತ್ತು ಸರಿಯಾದ ನಿರ್ವಹಣೆ, ಹಾಸ್ಟೆಲ್‌ನಿಂದ ಸಂಸ್ಥೆಗೆ ರಾತ್ರಿ ಸಮಯ ವಾಹನ ಸೌಲಭ್ಯ, ರೋಗಿಗಳ ಸಂಬಂಧಿಕರಿಂದ ಹಲ್ಲೆ ತಪ್ಪಿಸುವುದು, ಭದ್ರತೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೈದ್ಯೆಯರು ಮನವಿ ಮಾಡಿದರು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಬಿಎಂಸಿ ನಿರ್ದೇಶಕ ಡಾ.ರಮೇಶ್ ಕೃಷ್ಣ ಮತ್ತಿತರರು ಹಾಜರಿದ್ದರು.