ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಿರ್ಧಾರ ಅವೈಜ್ಞಾನಿಕ: ಹೊರಟ್ಟಿ

| Published : Jul 21 2025, 12:00 AM IST

ಸಾರಾಂಶ

ಅಧಿಕಾರಿ ಮಾಡುವ ತಪ್ಪಿನಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸುತ್ತಾರೆ. ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ ವರ್ಗಾವಣೆ ನಿರ್ಧಾರ ಯಾವ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ? ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ವರ್ಗಾವಣೆ ಸ್ಥಗಿತಗೊಳಿಸಿದ್ದಾರೆ.

ಹುಬ್ಬಳ್ಳಿ: ಶಿಕ್ಷಣ, ಚಿತ್ರಕಲೆ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ 240ಕ್ಕಿಂತಲೂ ಹೆಚ್ಚು ಮಕ್ಕಳಿರುವ ಶಾಲೆಗೆ ವರ್ಗಾವಣೆ ಮಾಡುವ ಅವೈಜ್ಞಾನಿಕ ಆದೇಶ ಸರ್ಕಾರ ಹೊರಡಿಸಿದ್ದನ್ನು ತೀವ್ರವಾಗಿ ಖಂಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸದ್ಯ ಅದು ಸ್ಥಗಿತಗೊಂಡಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಧಿಕಾರಿ ಮಾಡುವ ತಪ್ಪಿನಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸುತ್ತಾರೆ. ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ ವರ್ಗಾವಣೆ ನಿರ್ಧಾರ ಯಾವ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ? ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ವರ್ಗಾವಣೆ ಸ್ಥಗಿತಗೊಳಿಸಿದ್ದಾರೆ ಎಂದರು.

ಶಿಕ್ಷಕರ ಸಮಸ್ಯೆಗಳ ಕುರಿತು ವೈದ್ಯನಾಥ ವರದಿ ಜಾರಿ ಮಾಡಲಾಗಿದೆ. ಅದರಲ್ಲಿರುವ ದೈಹಿಕ ಶಿಕ್ಷಕರನ್ನು ಬಿಟ್ಟಿದ್ದು ಅದನ್ನೂ ಜಾರಿ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಪರಿಷತ್‌ನಲ್ಲಿ 45 ವರ್ಷ ಕರ್ತವ್ಯ ನಿರ್ವಹಿಸುವುದು ದೊಡ್ಡ ಸಾಧನೆ. ಅವರ ದಾಖಲೆಗಳನ್ನು ಅವರೇ ಮುರಿದು 50 ವರ್ಷದ ಮೈಲಿಗಲ್ಲು ಸ್ಥಾಪಿಸಲಿ. ಮುಂದಿನ ಬಾರಿ ರಾಜಕೀಯ ಪಕ್ಷಗಳು ಹೊರಟ್ಟಿ ಅವರನ್ನು ಪಕ್ಷಾತೀತವಾಗಿ ಪರಿಷತ್‌ಗೆ ಆಯ್ಕೆ ಮಾಡಬೇಕು ಎಂದರು.

ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ ಮಾತನಾಡಿ, ಆಗಸ್ಟ್ 29 ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಸಭಾಪತಿ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗುವುದು. ಅಂದು ಉತ್ತಮ ಐವರು ದೈಹಿಕ ಶಿಕ್ಷಕರನ್ನು ಗುರುತಿಸಿ ಅವರಿಗೆ ಬಸವರಾಜ ಹೊರಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಹೊರಟ್ಟಿ ಅವರು ಕೇವಲ ಶಿಕ್ಷಕರ ನಾಯಕರಲ್ಲ. ಸರ್ವ ಸಮಾಜದ ನಾಯಕ. ಇಡೀ ದಕ್ಷಿಣ ಕನ್ನಡ ಜಿಲ್ಲೆಯವರ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ರವಿ ಕೊಣ್ಣೂರು, ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ ಸೇರಿದಂತೆ ಇನ್ನಿತರರು ಮಾತನಾಡಿದರು.

ಪಿ.ಡಿ. ಕಾಲವಾಡ, ಬಾಲರಾಜ, ತ್ಯಾಗಂ, ಪ್ರಮೋದ ರೋಣದ, ಶಾಹಿನ್ ಬೇಗಂ, ಉಷಾ ಹೊಸಮನಿ, ಜಯರಾಂ, ವೆಂಕಟೇಶ, ಚಂದ್ರಶೇಖರ, ಬಸವರಾಜಪ್ಪ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ದೈಹಿಕ ಶಿಕ್ಷಣ ಶಿಕ್ಷರು ಇದ್ದರು. ಪ್ರಕಾಶ ಕಂಬಳಿ ಪ್ರಾರ್ಥಿಸಿದರು. ಜಿಲ್ಲಾಧ್ಯಕ್ಷ ಆರ್.ಎಚ್. ನೇಗಿಲ ಸ್ವಾಗತಿಸಿದರು.