ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರೂ ಇಲ್ಲಿನ ಶಾಸಕರು ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ದೂರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮುಂಬರುವ 2028 ವಿಧಾನ ಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರು ಕಾಂಗ್ರೆಸ್ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಿ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗು ನೀಗಿಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಅ.31ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರೂ ಇಲ್ಲಿನ ಶಾಸಕರು ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ದೂರುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಅನುದಾನ ನೀಡದೆ ಶಾಸಕರು ನಿತ್ಯ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಮಾಡುತ್ತಿದ್ದಾರಾ?. ಕ್ಷೇತ್ರದಲ್ಲಿ ಯಾವುದೇ ಶಾಸಕರಿರಲಿ ಸರ್ಕಾರದಿಂದ ನಿಯಮಾನುಸಾರ ಬರುವ ಅನುದಾನ ಬಂದೇ ಬರುತ್ತದೆ. ಅನುದಾನ ಹಂಚಿಕೆ ಅಧಿಕಾರ ಕ್ಷೇತ್ರದ ಶಾಸಕರಿಗಿರುವ ಕಾರಣ ಅವರು ತಮಗೆ ಬೇಕಾದ ಕಡೆಗೆ ಅನುದಾನ ಹಂಚಿಕೆ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಕಾರ್ಯಕರ್ತರಿಗೆ ಸಹಾಯವಾಗುತ್ತಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತದಾರರು ಗಟ್ಟಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಯಾರಿಗೇ ಟಿಕೆಟ್ ನಿಡಲಿ. ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಕರೆ ನೀಡಿದರು.

ನಾನು ಸ್ಪರ್ಧೆ ಸಿದ್ಧ:

ಕ್ಷೇತ್ರದಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ. ಶಾಸಕ ಎಚ್.ಟಿ.ಮಂಜು ಮತ್ತು ಮನ್ಮುಲ್ ನಿರ್ದೇಶಕ ಡಾಲು ರವಿ ಪರಸ್ಪರ ತೇಜೋವಧೆಯಲ್ಲಿ ನಿರತರಾಗಿದ್ದಾರೆ. ಇದರ ಲಾಭವನ್ನು ಕಾಂಗ್ರೆಸ್ ಪಡೆಯಬೇಕು. ಮುಂಬರುವ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ. ನನ್ನ ಸ್ಪರ್ಧೆಗೆ ಸಿಎಂ ಸೇರಿದಂತೆ ವರಿಷ್ಠರು, ಜಿಲ್ಲೆಯ ಸಚಿವರು, ಮುಖಂಡರ ಬೆಂಬಲ ಬೇಕು ಎಂದು ಕೋರಿದರು.

ಹಿರಿಯ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ಕ್ಷೇತ್ರದಲ್ಲಿರುವ ವಿಪಕ್ಷ ಶಾಸಕರ ಆಡಳಿತ ವೈಫಲ್ಯಗಳನ್ನು ಗುರುತಿಸಿ ಪಕ್ಷದ ಕಾರ್ಯಕರ್ತರು ಪ್ರಶ್ನಿಸುವಂತೆ ಕರೆ ನೀಡಿದರು. ಅ.31ರಂದು ಮಂಡ್ಯಕ್ಕೆ ಬರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯಲು ತಾಲೂಕಿಗೆ 75 ರಿಂದ 100 ಬಸ್‌ ಕಳುಹಿಸಲಾಗುತ್ತದೆ. ಪ್ರತಿ ಗ್ರಾಪಂಗೆ ಎರಡರಿಂದ ಮೂರು ಬಸ್‌ಗಳು ಬರಲಿವೆ. ಮಹಿಳಾ ಸ್ವ-ಸಹಾಯಕ ಸಂಘ, ಎನ್‌ಆರ್‌ಎಲ್‌ಎಂ ಮತ್ತು ಸಹಕಾರ ಸಂಘಗಳ ಸದಸ್ಯರು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.

ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಸೌಲಭ್ಯ ವಿತರಿಸಲಾಗುತ್ತದೆ. ಫಲಾನುಭವಿಗಳನ್ನು ಬಸ್‌ಗಳಲ್ಲಿ ಕರೆದೊಯ್ದು ಮತ್ತೆ ತಂದು ಬಿಡುವ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಗ್ಯಾರಂಟಿ ಯೋಜನೆಗಳ ಎಲ್ಲಾ ಫಲಾನುಭವಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಕೆಯುಐಡಿಎಫ್ ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್, ಜಿಪಂ ಮಾಜಿ ಸದಸ್ಯ ಎಲ್.ದೇವರಾಜು, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ಬ್ಲಾಕ್ ಕಾಂಗ್ರೆಸ್ ಪ.ಜಾ, ಪ.ಪಂ. ವಿಭಾಗದ ಅಧ್ಯಕ್ಷರಾದ ರಾಜಯ್ಯ, ಶಿವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲೋಲಾಕ್ಷಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್.ದಿವಾಕರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ವಕೀಲ ಚಟ್ಟಂಗೆರೆ ನಾಗೇಶ್, ಹೆತ್ತಗೋನಹಳ್ಳಿ ನಾರಾಯಣಗೌಡ, ಡಾ.ಕೆ.ಸಿ.ಶ್ರೀಕಾಂತ್, ಟಿ.ಎನ್.ರಾಜೇಶ್, ಕೆ.ಆರ್.ರವೀಂದ್ರ ಬಾಬು, ಕೆ.ಕೆ.ರಮೇಶ್, ಆಯಾಜ್, ನವೀದ್ ಅಹಮದ್, ಹಾಫೀಜುಲ್ಲಾ ಷರೀಫ್,(ಸಲ್ಲು), ಸಯ್ಯದ್ ಜಮೀಲ್, ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.