ಪಟ್ಟಸಾಲೆ ನೇಕಾರರು ಮುಖ್ಯವಾಹಿನಿಗೆ ಬರಲು ಸಹಕಾರ ನೀಡುತ್ತಿದ್ದು, ನಾನು ಕೂಡ ನೇಕಾರರ ಜತೆ ಒಡನಾಟದಿಂದ ದಾವಣಗೆರೆಯಲ್ಲಿ ವಾಸ ಮಾಡಿದ್ದೇನೆ
ಕೂಡ್ಲಿಗಿ: ಕಾಯಕ ನಂಬಿಕೊಂಡು ಬಂದಿರುವ ನೇಕಾರರ ಸಮಾಜದ ಸಮಸ್ಯೆಗಳಿಗೆ ಜೊತೆಗಿದ್ದು, ನಮ್ಮ ಸರ್ಕಾರ ಕೂಡ ನಿಮ್ಮ ಜತೆಯಲ್ಲಿ ನಿಲ್ಲಲಿದೆ, ಈ ಸಮುದಾಯಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ಅವರು ತಾಲೂಕಿನ ಕಾನಾಹೊಸಹಳ್ಳಿಯ ಗಾಣಿಗರ ಸಮುದಾಯದ ಭವನದಲ್ಲಿ ಅಖಿಲ ಕರ್ನಾಟಕ ಪಟ್ಟಸಾಲೆ ನೇಕಾರರ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ವಧು ವರರ ಉಚಿತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಪಟ್ಟಸಾಲೆ ನೇಕಾರರು ಮುಖ್ಯವಾಹಿನಿಗೆ ಬರಲು ಸಹಕಾರ ನೀಡುತ್ತಿದ್ದು, ನಾನು ಕೂಡ ನೇಕಾರರ ಜತೆ ಒಡನಾಟದಿಂದ ದಾವಣಗೆರೆಯಲ್ಲಿ ವಾಸ ಮಾಡಿದ್ದೇನೆ. ನಿಮ್ಮ ಕಷ್ಟ ನನಗೆ ಗೊತ್ತು ಹೀಗಾಗಿ ನಿಮ್ಮ ಸಮುದಾಯದ ಏಳ್ಗೆಗೆ ನಾನು ಬದ್ಧ ಎಂದರು.
ವಿದ್ಯಾವಂತರಲ್ಲೇ ಹೆಚ್ಚು ಜನರು ತಂದೆ ತಾಯಿಗಳನ್ನು ಅನಾಥ ಮಾಡಿ ಬೆಂಗಳೂರು ಬಾಂಬೆ ಸೇರಿಕೊಂಡು ಕೊನೆಗೆ ಅಂತ್ಯ ಸಂಸ್ಕಾರಕ್ಕೂ ಬಾರದೇ ಹೆತ್ತವರನ್ನು ಬೀದಿಪಾಲಾಗುವುದನ್ನು ನಾವು ನೋಡುತ್ತಿದ್ದೇವೆ ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ. ಇಲ್ಲಿ ಸೇರಿರುವ ವಧು ವರರು ತಮ್ಮ ತಂದೆತಾಯಿಯಂತೆ ಗಂಡನ ಮನೆಯಲ್ಲಿ ಅತ್ತೆ ಮಾವರನ್ನು ಕಾಣಬೇಕು, ಗಂಡನ ಮನೆಯವರು ಸಹ ತಮ್ಮ ಮಗಳಂತೆ ಸೊಸೆಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.ಅಖಿಲ ಕರ್ನಾಟಕ ಪಟ್ಟಸಾಲೆ ನೇಕಾರರ ಸಂಘದ ರಾಜ್ಯಾಧ್ಯಕ್ಷ ಎಚ್.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದ ಯಾವುದಾದರೂ ನಿಗಮ ಮಂಡಳಿಗೆ ಪಟ್ಟಸಾಲೆ ಸಮಾಜದವರಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು, ಬೆಂಗಳೂರಿನಲ್ಲಿ ಈ ಸಮಾಜಕ್ಕೆ ಸೂಕ್ತ ನಿವೇಶನ ಒದಗಿಸಬೇಕು, ಪಟ್ಟಸಾಲೆ ಸಮಾಜಕ್ಕೆ ಪ್ರತ್ಯೇಕ ಅನುದಾನ ನೀಡುವುದರ ಮೂಲಕ ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಒತ್ತಾಯಿಸಿದರು.
ಪಟ್ಟಸಾಲೆ ನೇಕಾರ ಸಮಾಜದ ಗುಳೇದಗುಡ್ಡದ ಡಾ.ಶಿವಚರಣ ದೇವರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಶೇಖಾ, ಪಟ್ಟಸಾಲೆ ನೇಕಾರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಕೆ.ಟಿ. ಮಲ್ಲೇಶ್, ಜಿಲ್ಲಾ ಗೌರವಾಧ್ಯಕ್ಷ ಎ. ಚನ್ನಬಸಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಚ್.ಎನ್. ಗೋವಿಂದಮ್ಮ, ಪಟ್ಟಸಾಲೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ. ಮಧುಸೂಧನ, ತಾಲೂಕಾಧ್ಯಕ್ಷ ನಾಗರಾಜ್ ಸೊಕ್ಕೆ, ಕಾನಾಹೊಸಹಳ್ಳಿ ಘಟಕದ ಅಧ್ಯಕ್ಷ ಕೆ.ಎಸ್. ವಿಶ್ವನಾಥ್, ಕೆ.ನಾಗರಾಜ, ಎನ್.ಆರ್.ವಿಜಯಕುಮಾರ್, ಎನ್.ಎಂ. ಸುನೀಲ್, ಉಜ್ಜಿನಿ ತಿಮ್ಮಣ್ಣ, ಕೊಟ್ಟೂರಿನ ವಿ.ಎಸ್. ಕೊಟ್ರೇಶ್, ಉಜ್ಜಿನಿಯ ಅಣಜಿ ಭೀಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎ.ಚನ್ನಬಸಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಎನ್. ಭೀಮಪ್ಪ, ಎನ್.ಕೆ. ನಾಗೇಂದ್ರಪ್ಪ, ಸಾಹಿತಿ ಯು. ಜಗನ್ನಾಥ, ತೊರೆ ಕೋಲಮ್ಮನಹಳ್ಳಿ ಪೀತಾಂಬರ, ಎಸ್.ಕೆ. ಮಹಾಂತೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಟ್ಟೂರು ತಾಲೂಕು ಮಾಜಿ ಅಧ್ಯಕ್ಷ ಅಣಜಿ ಸಿದ್ಧಲಿಂಗಪ್ಪ, ಬಿ.ಟಿ. ಓಂಕಾರಪ್ಪ, ಹೂಡೇಂ ಕರಿಬಸಪ್ಪ ಉಪಸ್ಥಿತರಿದ್ದರು.ಎ.ಎನ್. ಕೖಷ್ಣಮೂರ್ತಿ ಪ್ರಾರ್ಥಿಸಿದರು. ಬಿ.ಟಿ. ಓಂಕಾರಪ್ಪ ಸ್ವಾಗತಿಸಿದರು. ಮಹೇಶ್ ಕೊಟ್ಟೂರು ನಿರೂಪಿಸಿದರು. ನಾಗರಾಜ ಹೊರಮಠ ವಂದಿಸಿದರು.
ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ,ಚೆನ್ನೈ ಸೇರಿದಂತೆ 400ಕ್ಕೂ ಹೆಚ್ಚು ವಧು ವರರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶಕ್ಕೂ ಮುಂಚೆ ನೇಕಾರರ ಸಂತ ಶ್ರೀ ಶಾಲಿಹೋತ್ರ ಮಹರ್ಷಿ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ ಹೊತ್ತು ಕಳೆ ತಂದರು. ಡೊಳ್ಳು ಕಲಾವಿದರು ಮೆರವಣಿಗೆ ಉದ್ದಕ್ಕೂ ತಮ್ಮ ಕಲೆ ಪ್ರದರ್ಶಿಸಿ ಗಮನ ಸೆಳೆದರು.