ಸಾರಾಂಶ
ಕೊರತೆಯನ್ನು ನಿವಾರಿಸಲು ಧರ್ಮಸ್ಥಳ ಶ್ರೀ ಕ್ಷೇತ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿ ನೆರವನ್ನು ನೀಡುತ್ತಿದೆ ಎಂದು ಅರಸೀಕೆರೆ ಶ್ರೀ ಬಸವರಾಜೇಂದ್ರ ಪ್ರೌಢಶಾಲಾ ಮುಖ್ಯ ಶಿಕ್ಷಕ ದಯಾನಂದ್ ಹೇಳಿದರು. ಅರಸೀಕೆರೆಯಲ್ಲಿ ಮಾದಕ ವ್ಯಸನ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ । ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜನೆ
ಕನ್ನಡಪ್ರಭ ವಾರ್ತೆ ಅರಸೀಕೆರೆಸರ್ಕಾರ ಏನೇ ಸೌಲಭ್ಯ ಒದಗಿಸಿದರೂ ಸಹ ಆನೇಕ ಕೊರತೆಗಳು ಇರುತ್ತವೆ. ಇಂತಹ ಕೊರತೆಯನ್ನು ನಿವಾರಿಸಲು ಧರ್ಮಸ್ಥಳ ಶ್ರೀ ಕ್ಷೇತ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿ ನೆರವನ್ನು ನೀಡುತ್ತಿದೆ ಎಂದು ಅರಸೀಕೆರೆ ಶ್ರೀ ಬಸವರಾಜೇಂದ್ರ ಪ್ರೌಢಶಾಲಾ ಮುಖ್ಯ ಶಿಕ್ಷಕ ದಯಾನಂದ್ ಹೇಳಿದರು.
ನಗರದ ತಮ್ಮ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ತಂಬಾಕು ಸೇವನೆ ಕುರಿತಂತೆ ಪ್ರಬಂಧ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಜಿಲ್ಲಾ ಕೇಂದ್ರದಲ್ಲಿ ಬಹುಮಾನ ಪಡೆದಿದ್ದ ಬಹುಮಾನವನ್ನು ಗಣ್ಯರಿಂದ ಕೊಡಿಸಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ರಮ ಶ್ಲಾಘನೀಯ’ ಎಂದು ಹೇಳಿದರು.ಜನಜಾಗೃತಿ ಜಿಲ್ಲಾ ಸಮಿತಿ ಸದಸ್ಯ ಗಣೇಶ್ ಮಾತನಾಡಿ, ಮಾದಕ ವಸ್ತುಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವುಗಳಿಂದ ಬಹಳ ಎಚ್ಚರವಿರಬೇಕು ಎಂದು ಹೇಳಿದರು.
ಪತ್ರಕರ್ತ ಎಚ್.ಡಿ.ಸೀತಾರಾಮ್ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಅನೇಕ ಭಾಗಗಳಲ್ಲಿ ಕಾಣಿಸಿಕೊಳ್ಳುವ ಇದು ಸಾವಿರಾರು ರಾಸಾಯನಿಕಗಳನ್ನು ಹೊಂದಿದೆ. ಧೂಮಪಾನ ಸೇವನೆ ಮಾಡುವರಿಗಷ್ಟೇ ಅಲ್ಲ ಅವರ ಸನಿಹ ಇದ್ದವರಿಗೂ ಸಹ ಕ್ಯಾನ್ಸರ್ ಹರಡುತ್ತದೆ. ಇಂದು ಯುವ ಪೀಳಿಗೆ ಮಾದಕ ವಸ್ತುಗಳಿಗೆ ಸೆಳೆಯಲ್ಪಡುತ್ತಿದ್ದಾರೆ. ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕಾದರೆ ಇದರಿಂದ ದೂರ ಇರಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಎಲ್ಲರಿಗೂ ಆಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಾದಕ ವಸ್ತುಗಳ ವಿರೋಧಿ ಕಾರ್ಯಕ್ರಮವು ಒಂದಾಗಿದೆ ಎಂದು ಮಾಹಿತಿ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ದೇವಾಲಯಗಳ ಜೀರ್ಣೋದ್ಧಾರ, ದೇವಾಲಯಗಳ ನಿರ್ಮಾಣಕ್ಕೆ ನೆರವು, ಕೆರೆ ಕಟ್ಟೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ, ಪೀಠೋಪಕರಣ, ಶಿಕ್ಷಕರನ್ನು ಒದಗಿಸುವುದು, ಶಾಲಾ ಕಟ್ಟಡ ನಿರ್ಮಾಣ ಮತ್ತು ಎಲ್ಲಕ್ಕಿಂತ ಪ್ರಮುಖವಾಗಿ ಮಧ್ಯ ವ್ಯಸನಿಗಳನ್ನು ಅದರಿಂದ ಹೊರ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.