ಮಕ್ಕಳ ರಕ್ಷಣಾ ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಿ: ಶೇಖರಗೌಡ ರಾಮತ್ನಾಳ

| Published : Feb 01 2025, 12:03 AM IST

ಸಾರಾಂಶ

ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಸಪರ್ಕಮ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಕರೆ ನೀಡಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಸಪರ್ಕಮ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಕರೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನಡೆದ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಮಕ್ಕಳ ರಕ್ಷಣೆ ಕೂಡಾ ಕಡ್ಡಾಯವಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಸೇರಿದಂತೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಶಾಲೆಯಿಂದ ಅಂದರೆ ಶಿಕ್ಷಣದಿಂದ ಮಕ್ಕಳು ಹೊರೆತು ಉಳಿದಲ್ಲಿ ಮಾತ್ರ ಅಂತಹ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗಿ ಕಂಡುಬರುತ್ತಿವೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸವಾಗಬೇಕು. ಅಲ್ಲದೇ ಅಂತಹ ಮಕ್ಕಳ ಅಂಕಿ ಅಂಶಗಳ ಮಾಹಿತಿ ಸಹ ಸರಿಯಾಗಿ ದೊರೆಯುತ್ತಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರ ರಕ್ಷಣೆ ಸಹ ಮುಖ್ಯವಾಗಿದೆ ಎಂದು ತಿಳಿಸಿದರು.

ಈಗಾಗಲೇ ಕೆಲವೊಂದು ಶಾಲೆಗಳಿಗೆ ಭೇಟಿ ನೀಡಲಾಗಿದ್ದು, ಮಕ್ಕಳ ಹಕ್ಕುಗಳ ಕಾಯ್ದೆಗಳು ಸಮಪರ್ಕವಾಗಿ ಅನುಷ್ಠಾನಗೊಳ್ಳದಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ ರಾಮತ್ನಾಳ ಅವರು, ಮುಂದಿನ 15 ದಿನಗಳಲ್ಲಿ ಪ್ರತಿಯೊಬ್ಬರೂ ಮಕ್ಕಳ ರಕ್ಷಣಾ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಶಿಕ್ಷಕರ ವರೆಗೆ ಕೆಲಸ ಮಾಡಬೇಕು. ನಂತರದಲ್ಲಿ ಕಾಯ್ದೆ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ಸಹ ನಡೆಸಲಾಗುವುದೆಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ಜಿದ್ದಿ ಮಾತನಾಡಿ, ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಜಾರಿಯಾಗಬೇಕು. ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅದು ಕಂಡುಬಂದಿಲ್ಲ. ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ರಕ್ಷಣೆ ಸಹ ಮುಖ್ಯವಾಗಿದೆ. ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತಂದು ಮಕ್ಕಳ ಹಕ್ಕುಗಳ ಮೇಲಾಗುವ ಪರಿಣಾಮ ತಡೆಯಲು ಸಾಧ್ಯವಾಗುತ್ತದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಮಾತನಾಡಿ, ಇಂದಿನ ಆಧುನಿಕತೆ ಭರಾಟೆಯಲ್ಲಿ ಸಾಮಾಜಿಕ ಜಾಲತಾಣ ಸಾಕಷ್ಟು ಪರಿಣಾಮ ಬೀರುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮಕ್ಕಳ ಹಕ್ಕುಗಳಿಗೆ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿಯ ಜೊತೆಗೆ 112ಗೂ ಸಹ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿವೇಕಾನಂದ ಎಂ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ. ಮಾತನಾಡಿದರು. ಕೊಪ್ಪಳದ ಯುನಿಸೆಫ್‌ನ ರಾಘವೇಂದ್ರ ಭಟ್ ಅವರು ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ, ಮಿಷನ್ ವಾತ್ಸಲ್ಯ, ಪೋಕ್ಸೋ ಕಾಯ್ದೆ-2012, ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಎಂ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಸಿಓ, ಬಿಆರ್‌ಸಿ, ಬಿಆರ್‌ಪಿ, ಸಿಆರ್‌ಪಿ, ಡಯಟ್‌ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.