ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸರ್ಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಲ್ಲಿ ಜನಪರ ನಾಯಕರಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ನಗರ ಹೊರವಲಯದ ಕಂದವಾರ ವಾರ್ಡ್ ನ ಶಾಸಕರ ಗೃಹ ಕಚೇರಿಯಲ್ಲಿ ಸೋಮವಾರ ಮಂಚನಬಲೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ವಿ.ಮಧು,ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮತ್ತು ಸದಸ್ಯರಿಗೆ ಹಾಗೂ ಪಿಎಲ್ ಡಿ ಬ್ಯಾಂಕ್ ನ ನಾಮನಿರ್ದೇಶಿತ ಸದಸ್ಯ ವೆಂಕಟನಾರಾಯಣಪ್ಪಗೆ ಶಾಸಕರು ಹಮ್ಮಿಕೊಂಡಿದ್ದ ಸನ್ಮಾನ ಸಭೆಯಲ್ಲಿ ಮಾತನಾಡಿದರು.
ಯೋಜನೆಗಳ ಜಾರಿಗೊಳಿಸಿಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದ ಮೂಲಕ ಯಶಸ್ವಿಯಾಗಿ ಜಾರಿಗೊಳಿಸಿದಲ್ಲಿ ನೀವು ಸಹ ಜನಪರ ನಾಯಕರಾಗಿ ಬೆಳೆಯಲು ಸಾಧ್ಯವಿದೆ. ನಿಮ್ಮ ಅಧಿಕಾರ ಮತ್ತು ವ್ಯಾಪ್ತಿಯ ಸಂಪೂರ್ಣ ಪರಿಚಯ ಮಾಡಿಕೊಳ್ಳಿ. ಈ ನಿಟ್ಟಿನಲ್ಲಿ ಸ್ಥಳೀಯ ಸಂಘ, ಸಂಸ್ಥೆಗಳ ಸಹಕಾರ ಪಡೆಯಬೇಕು ಎಂದು ಹೇಳಿದರು.
ಪಂಚಾಯತ್ ಸದಸ್ಯರು ತಮ್ಮ ವೈಯಕ್ತಿಕ ಜೀವನಕ್ಕಿಂತಲೂ ಹೆಚ್ಚು ಸಮಾಜ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಹಲವು ಒತ್ತಡಗಳಿಗೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಮಾನಸಿಕವಾಗಿ ಗಟ್ಟಿಗೊಳ್ಳುವ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡು ಮಾದರಿ ನಾಯಕರಾಗಬೇಕು. ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯತ್ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಜನರ ಸಮಸ್ಯೆಗೆ ಸ್ಪಂದಿಸಿ
ಸದಸ್ಯರ ಅಧಿಕಾರಾವಧಿ ಮುಗಿದ ನಂತರವೂ ಗ್ರಾಮದ ಅಭಿವೃದ್ಧಿಯಲ್ಲಿ ತಾವುಗಳು ಮತದಾರರಾಗಿ ತಮ್ಮ ಹಕ್ಕನ್ನು ಚಲಾಯಿಸುವ ನಿಟ್ಟಿನಲ್ಲಿ ನಿರಂತರ ಅಧ್ಯಯನ ಮಾಡಿ ತಮ್ಮ ವ್ಯಾಪ್ತಿಯ ಯುವಕರನ್ನು, ಮಹಿಳೆಯರನ್ನು ಜಾಗೃತಗೊಳಿಸುವ ಕಾರ್ಯನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸಭಾ ಸದಸ್ಯರ ವೇದಿಕೆಗಳನ್ನು ರಚಿಸಿ ಜನರ ಸಮಸ್ಯೆಗಳಿಗೆ ಧ್ವನಿ ಆಗುವಂತೆ ಕಿವಿಮಾತು ಹೇಳಿದರು.ಸನ್ಮಾನ ಸ್ವೀಕರಿಸಿದ ಮಂಚನಬಲೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ವಿ.ಮಧು ಮಾತನಾಡಿ, ಎಲ್ಲಡೆ ಶಾಸಕರಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸನ್ಮಾನ ಮಾಡುವುದು ರೂಡಿಯಾಗಿದೆ. ಆದರೆ ನಮ್ಮ ಶಾಸಕ ಪ್ರದೀಪ್ ಈಶ್ವರ್ ರವರು ನಮಗೆ ಸನ್ಮಾನ ಮಾಡಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಸನ್ಮಾನ ಜವಾಬ್ದಾರಿ ಹೆಚ್ಚಿಸಿದೆಶಾಸಕರು ಸನ್ಮಾನ ಮಾಡಿರುವುದರಿಂದ ನಮ್ಮ ಕರ್ತವ್ಯ ಮುಗಿಯಿತೆಂದು ಕುಳಿತು ಕೊಳ್ಳುವಂತಿಲ್ಲಾ. ಈಗ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ನನಗೆ ದೊರೆತ ಅಧಿಕಾರದ ಅವಧಿಯಲ್ಲಿ ಪಂಚಾಯಿತಿಯನ್ನು ಅಭಿವೃದ್ಧಿ ಮಾಡಲು ಪ್ರಮಾಣಿಕವಾಗಿ ಸ್ಪಂದಿಸಿ ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಮಾಡಲು ಶ್ರಮಿಸಲಾಗುವುದು.ಜನತೆಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಚರಂಡಿ,ಬೀದಿ ದೀಪ, ವಸತಿ ರಹಿತರಿಗೆ ವಸತಿ ಕಲ್ಪಿಸಲು ಶ್ರಮಿಸುವುದಾಗಿ ಹೇಳಿದರು.
ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಿ, ಜನತೆ ಆರೋಗ್ಯದಿಂದಿರುವಂತೆ ಮಾಡಲು ಶ್ರಮಿಸುತ್ತೇನೆ ಮತ್ತು ಗ್ರಾಮದ ಕಟ್ಟ ಕಡೆಯ ವ್ಯೆಕ್ತಿಗೂ ಪಂಚಾಯತಿಯಿಂದ ನ್ಯಾಯ ದೊರೆಯುವಂತೆ ನೋಡಿ ಕೊಳ್ಳುತ್ತೇನೆ. ಶಾಸಕರು ಮತ್ತು ಸರ್ಕಾರದಿಂದ ಅನುದಾನವನ್ನು ಹೆಚ್ಚಿಗೆ ತಂದು ಪಂಚಾಯತಿಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.ಶಾಸಕ ಪ್ರದೀಪ್ ಈಶ್ವರ್‌ಗೆ ಸನ್ಮಾನ
ಇದೇ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಶಾಸಕ ಪ್ರದೀಪ್ ಈಶ್ವರ್ ರನ್ನು ಸನ್ಮಾನಿಸಲಾಯಿತು. ಈ ವೇಳೆ ಪಿಎಲ್ ಡಿ ಬ್ಯಾಂಕ್ ನ ನಾಮನಿರ್ಧೇಶಿತ ಸದಸ್ಯ ವೆಂಕಟನಾರಾಯಣಪ್ಪ, ಗ್ರಾಮಪಂಚಾಯತಿ ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮತ್ತು ಸದಸ್ಯರು, ಮುಖಂಡರಾದ ಅರವಿಂದ್, ಎಸ್.ಪಿ.ಶ್ರೀನಿವಾಸ್, ಅಲ್ಲುಅನಿಲ್, ಮತ್ತಿತರರು ಇದ್ದರು.