ಸಾರಾಂಶ
- ಅವಾಚ್ಯವಾಗಿ ಬೈದು, ಬಾ ಅಂತಾ ಸವಾಲು ಹಾಕಿದ ನಿಮ್ಮಜ್ಜ ಅಮಾಯಕನಾ ಎಂದು ಪ್ರಶ್ನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪೊಲೀಸರೆಂದರೆ ಬರೀ ಬಂದೂಕು, ಲಾಠಿ ಮಾತನಾಡುವುದಿಲ್ಲ, ಮಾತಿನಲ್ಲೇ ಅದಕ್ಕಿಂತ ತೀಕ್ಷ್ಣವಾಗಿ ಏಟು ಕೊಡಬಲ್ಲರೆಂಬುದಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ)ರಾದ ಆರ್. ಹಿತೇಂದ್ರ ಸಾಕ್ಷಿಯಾಗಿದ್ದಾರೆ ಎನ್ನಲಾಗಿದೆ.ದಾವಣಗೆರೆ ಕಲ್ಲು ತೂರಾಟ, ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸದಂತೆ ವಕೀಲರೊಬ್ಬರು ಮನವಿ ಮಾಡಿದ್ದಾರೆ. ಇಡೀ ಘಟನೆಗೆ ಬೇರೆ ಯಾರೋ ಕಾರಣವೆಂದು ಹೇಳಿದಾಗ ತದೇಕಚಿತ್ತದಿಂದ ಆಲಿಸಿದ ಎಡಿಜಿಪಿ ಹಿತೇಂದ್ರ ಅವರು, ಘಟನೆ ಬಗ್ಗೆ ನೀವು ಒಂದು ಸೈಡ್‌ನಿಂದ ಹೇಳುವುದಲ್ಲ. ಎರಡೂ ಕಡೆಯ ಬಗ್ಗೆಯೂ ಮಾತನಾಡಿ ಎಂದು ಮಾತಲ್ಲೇ ತಿವಿದಿದ್ದಾರೆಂದು ಗೊತ್ತಾಗಿದೆ.
ಅಮಾಯಕರು, ಮಕ್ಕಳು, ಮಹಿಳೆಯರು, ವಯೋವೃದ್ಧರು ತಮ್ಮ ಪಾಡಿಗೆ ತಾವು ಮನೆಯಲ್ಲಿದ್ದರೆ ಏಕಾಏಕಿ ಗುಂಪು ಕಟ್ಟಿಕೊಂಡು ಹೋಗಿ, ಕೇಕೆ ಹಾಕಿ, ಕಲ್ಲು ತೂರಾಟ ಮಾಡಿ, ಭಯ ಹುಟ್ಟು ಹಾಕಿದ್ದರ ಬಗ್ಗೆ ನೀವು ಯಾಕೆ ಮಾತನಾಡುವುದಿಲ್ಲ? ಅಂತಹ ಕಿಡಿಗೇಡಿಗಳು ನಿಮ್ಮ ದೃಷ್ಟಿಯಲ್ಲಿ ಅಮಾಯಕರೇ ಎಂದು ಪ್ರಶ್ನಿಸಿದರೆನ್ನಲಾಗಿದೆ.ಶಾಂತಿ, ಸಾಮರಸ್ಯದ ಪಾಠ ಅದೇ ನಿಮ್ಮ ಅಜ್ಜ ವೀಡಿಯೋ ಮಾಡಿ, ಅವಾಚ್ಯವಾಗಿ ನಿಂದಿಸಿದಾಗ ಇರಲಿಲ್ಲವೇ? ನಿಮ್ಮ ಅಜ್ಜನು ಮತ್ತೊಂದು ಸಮುದಾಯದ ವ್ಯಕ್ತಿಯ ತಾಯಿ, ಹೆಂಡತಿ, ಅಕ್ಕ-ತಂಗಿಯರ ಬಗ್ಗೆ ಅತ್ಯಂತ ತುಚ್ಛವಾಗಿ ಬೈದು ವೀಡಿಯೋ ಮಾಡಿಸಿ, ವಾಟ್ಸಪ್‌ಗೆ ಹಾಕುವಾಗ ನೀವು ಎಲ್ಲಿ ಹೋಗಿದ್ದಿರಿ? ಅದನ್ನು ಮಾಡಿದ್ದಕ್ಕೆ ಏನು ಹೇಳುತ್ತೀರಿ ಎಂದು ಮಾತಲ್ಲೇ ತರಾಟೆಗೆ ತೆಗೆದುಕೊಂಡರು ಎಂಬುದಾಗಿ ತಿಳಿದುಬಂದಿದೆ.
ನಿಮ್ಮ ಅಜ್ಜ ಬೈದ ವ್ಯಕ್ತಿಯೇನು ಬಂದು ಕಲ್ಲು ತೂರಾಟ ಮಾಡಿದ್ದನಾ? ಅವನಿಗೆ ಅಲ್ಲಿಗೆ ಬಾ, ಇಲ್ಲಿಗೆ ಬಾ ಅಂತಾ ಸವಾಲು ಹಾಕಿ, ವೀಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟವರು ಅಮಾಯಕರಾ? ಅದೇ ಅಜ್ಜನಿಂದ ಬೈಸಿಕೊಂಡು, ನಿಮ್ಮವರಿಂದಲೇ ಸವಾಲು ಹಾಕಿಸಿಕೊಂಡವನು ಸವಾಲು ಸ್ವೀಕರಿಸಿ ಬಂದಿದ್ದಾನೆ, ಹೋಗಿದ್ದಾನೆ. ಹೀಗೆ ಬಂದವನೇನು ಅಲ್ಲಿ ಕಲ್ಲು ತೂರಾಟ ಮಾಡಿದ್ದಾನಾ? ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದು ಯಾರು? ಅಮಾಯಕರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಗಣೇಶನ ಮೆರವಣಿಗೆ ಮೇಲೆ ಕಲ್ಲು ಹೊಡೆಯಬೇಕಾ? ಅದೇ ನಿಮ್ಮ ಹಬ್ಬದ ಮೆರವಣಿಗೆ ಮೇಲೆ ಯಾರಾದರೂ ಕಲ್ಲು ಹೊಡೆದಿದ್ದರಾ? ಯಾರೇ ಆಗಲಿ ಅಮಾಯಕರೆಂದು ಬರಬೇಡಿ. ಪೊಲೀಸ್ ಇಲಾಖೆ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಯಾರನ್ನೂ ವಶಕ್ಕೆ ಪಡೆಯತ್ತಿಲ್ಲ, ಬಂಧಿಸುತ್ತಿಲ್ಲ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಸಿಸಿ ಕ್ಯಾಮೆರಾ ಫುಟೇಜ್‌ಗಳು, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವೀಡಿಯೋ, ಫೋಟೋಗಳನ್ನು ಆಧರಿಸಿಯೇ ವಶಕ್ಕೆ ಪಡೆಯುತ್ತಿದೆ. ಅಮಾಯಕರೆಂದು ಕಲ್ಲು ತೂರಾಟ ಮಾಡಿ, ಸಾಮರಸ್ಯಕ್ಕೆ ಧಕ್ಕೆ ತಂದವರ ಪರ ಬಂದರೆ ಏನರ್ಥ ಎಂಬುದಾಗಿ ಎಡಿಜಿಪಿ ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಅಮಾಯಕರನ್ನು ಬಂಧಿಸದಂತೆ ಮನವಿ ಮಾಡಲು ಬಂದವರು ಪೆಚ್ಚಾದರು ಎಂದು ಗೊತ್ತಾಗಿದೆ.
- - -