ಸಾರಾಂಶ
ಕನಕಪುರ: ಭ್ರಷ್ಟಾಚಾರ, ಸುಲಿಗೆ, ದುರ್ನಡತೆ, ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಯುವ ಜೆಡಿಎಸ್ ಉಪಾಧ್ಯಕ್ಷ, ಚಿನ್ನಸ್ವಾಮಿ ಆಗ್ರಹಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಈ ಬಗ್ಗೆ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಮುಡಾ ಹಗರಣದಿಂದ ಆಗುತ್ತಿರುವ ಮುಜುಗರ ತಪ್ಪಿಸಿಕೊಳ್ಳಲು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ರವರ ಮೂಲಕ ಅಸಂಬದ್ಧ ಹೇಳಿಕೆ ಕೊಡಿಸಿದ್ದು ಕೂಡಲೇ ಇವರೆಲ್ಲರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಅಧಿಕಾರಿಯು ರಾಜ್ಯ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಇವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುವುದು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ನವರು ಪಡೆದಿರುವ 14 ನಿವೇಶನಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲು ಪತ್ರ ಬರೆಯುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಕೇಂದ್ರಸಚಿವರ ಬಗ್ಗೆ ಅಸಂಬದ್ಧ ಪದ ಬಳಕೆ ಮಾಡಿರುವ ಎಡಿಜಿಪಿಯನ್ನು ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು,ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಒಬ್ಬ ಐಪಿಎಸ್ ಅಧಿಕಾರಿ ಕೇವಲವಾಗಿ ಮಾತನಾಡಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಕ್ಕೆ ಧಿಕ್ಕಾರವಿರಲಿ, ಕೂಡಲೇ ಈ ಐಪಿಎಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಆಗ್ರಹಿಸಿದರು.ಜೆಡಿಎಸ್ ಪಕ್ಷದ ತಾಲೂಕು ಮಹಿಳಾ ಅಧ್ಯಕ್ಷೆ ಶೋಭಾ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರವು ಹಗರಣಗಳ ಸರ್ಕಾರವಾಗಿದ್ದು, ರಾಜ್ಯದಲ್ಲಿ ಅವರ ಆಡಳಿತದ ಅವಧಿಯಲ್ಲಿ ಇದುವರೆಗೂ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ. ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಉನ್ನತ ಸ್ಥಾನದ ಮಂತ್ರಿ ಪದವಿಯನ್ನು ಸಹಿಸಲಾಗದ ಕಾಂಗ್ರೆಸ್ ಸರ್ಕಾರ ಈ ರೀತಿ ಹುನ್ನಾರಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡ ನಲ್ಲಹಳ್ಳಿ ಶಿವಕುಮಾರ್ ಮಾತನಾಡಿ, ಎಡಿಜಿಪಿ ಚಂದ್ರಶೇಖರ್, ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಪತ್ರದಲ್ಲಿ ಬರೆದಿರುವುದು ಅಕ್ಷಮ್ಯ ಅಪರಾಧವಾಗಿದೆ, ಕಾಂಗ್ರೆಸ್ ನವರಿಗೆ ಈ ಹೇಳಿಕೆಯಿಂದ ಖುಷಿ ತಂದಿರಬಹುದು, ಇಂತಹ ಹೇಳಿಕೆಗಳು ಮುಂದೊಂದು ದಿನ ನಿಮಗೂ ತಿರುಗುಬಾಣವಾಗಬಹುದು ಎಚ್ಚರಿಕೆಯಿಂದಿರಿ ಎಂದು ಖಂಡಿಸಿದರು.ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಮಾಜಿ ತಾಲೂಕು ಅಧ್ಯಕ್ಷ ಸಿದ್ದಮರಿಗೌಡ, ಮರಳವಾಡಿ ಉಮಾಶಂಕರ್, ಪಂಚಲಿಂಗೇಗೌಡ, ತಿಮ್ಮೇಗೌಡ, ವಕೀಲ ಜಯರಾಮೇಗೌಡ, ಮುಖಂಡರಾದ ಬಿ ಟಿ ನಾಗರಾಜು, ಕುರುಪೇಟೆ ಲೋಕೇಶ್, ಕಿಟ್ಟಿ, ಸಿದ್ದು, ನಾಗರಾಜ್, ಗಣೇಶ್, ಅರಳಾಳು ರಾಜೇಂದ್ರ, ಸೇರಿದಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.