ಸಾರಿಗೆ ನಿಯಮ ಪಾಲಿಸುವುದು ಅತೀ ಅವಶ್ಯಕ: ಡಿಸಿಪಿ ರವೀಶ್

| Published : Jan 20 2024, 02:00 AM IST

ಸಾರಾಂಶ

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕಳೆದ ವರ್ಷ 109 ಜನರು ಅಪಘಾತಗಳಲ್ಲಿ ಮರಣ ಹೊಂದಿದ್ದಾರೆ. ಸಂಚಾರ ನಿಯಮ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿಪಿ ರವೀಶ್ ಸಿ.ಆರ್. ಹೇಳಿದರು.

ಹುಬ್ಬಳ್ಳಿ: ಮಾನವನ ಜೀವ ಅತ್ಯಮೂಲ್ಯವಾದುದ್ದು. ಸಣ್ಣ ಪುಟ್ಟ ತಪ್ಪುಗಳಿಂದ ಅಪಘಾತಗಳು ಸಂಭವಿಸಬಹುದು. ನಮ್ಮವರಿಗಾಗಿ ಅತಿ ಸುರಕ್ಷತೆಯಿಂದ ವಾಹನ ಚಲಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸುವುದು ಅತೀ ಅವಶ್ಯಕ ಎಂದು ಡಿಸಿಪಿ ರವೀಶ್ ಸಿ.ಆರ್ ಹೇಳಿದರು.

ಇಲ್ಲಿನ ಕಿಮ್ಸ್ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಘಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ-ನಮ್ಮ ಮೊದಲ ಆದ್ಯತೆ ಎಂಬ ಧ್ಯೇಯ ವಾಕ್ಯದಡಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕಳೆದ ವರ್ಷ 109 ಜನರು ಅಪಘಾತಗಳಲ್ಲಿ ಮರಣ ಹೊಂದಿದ್ದಾರೆ. ಸಂಚಾರ ನಿಯಮ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಮಾತನಾಡಿ, ಯುವಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಪ್ರತಿ ವರ್ಷ ಕಿಮ್ಸ್‌ನ 2-3 ವಿದ್ಯಾರ್ಥಿಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಾರೆ. ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಅಗತ್ಯ ಕ್ರಮ ಅನುಸರಿಸಬೇಕು. ಮಾನವನ ಜೀವ ಅತ್ಯಮೂಲ್ಯವಾಗಿರುವುದರಿಂದ ಅದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಮಾತನಾಡಿ, ಪ್ರತಿವರ್ಷ ಜನವರಿ ತಿಂಗಳಲ್ಲಿ ರಸ್ತೆ ಸುರಕ್ಷತಾ ಮಾಸ ಹಮ್ಮಿಕೊಳ್ಳಲಾಗುತ್ತದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗುತ್ತಿವೆ. ಅಪಘಾತಗಳನ್ನು ತಡೆಗಟ್ಟಲು ಎಲ್ಲರೂ ಮುಂದಾಗಬೇಕಿದೆ ಎಂದರು.

ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು ವೈದ್ಯಕೀಯ ಉಪಚಾರ ಹಾಗೂ ಸಮೀಪದ ಆಸ್ಪತ್ರೆಗೆ ಸೇರಿಸಬೇಕು. ಸಹಾಯ ಮಾಡಿದರೆ ಮೊದಲಿನ ಹಾಗೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಎದುರಾಗುವುದಿಲ್ಲ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ ದೊಡ್ಡ ವಾಹನಗಳನ್ನು ಚಲಾಯಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ.ಪಿ. ಮಾತನಾಡಿ, ಎಜುಕೇಶನ್, ಎನ್‌ಪೋರ್ಸ್‌ಮೆಂಟ್ ಹಾಗೂ ಎಂಜಿನಿಯರಿಂಗ್ ಮತ್ತು ಡೈರೆಕ್ಷನ್, ಡೆಡಿಕೇಶನ್, ಡಿಟರ್ಮಿನೇಷನ್, ಡಿಸಿಪ್ಲಿನ್ ಹಾಗೂ ಡೆಡ್ ಲೈನ್ ಎಂಬ 3 ಇ ಹಾಗೂ 5ಡಿ ಗಳನ್ನು ವಿದ್ಯಾರ್ಥಿ ಅನುಸರಿಸಬೇಕಾಗಿದೆ ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಪ್ರತಿ 3 ನಿಮಿಷಕ್ಕೆ ಒಬ್ಬರು ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ಗಂಟೆಗೆ ಇಬ್ಬರು ವ್ಯಕ್ತಿಗಳು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಾರೆ. 2022ರಲ್ಲಿ ರಾಜ್ಯದಲ್ಲಿ 39762 ರಸ್ತೆ ಅಪಘಾತ ಸಂಭವಿಸಿದ್ದು, ಈ ಪೈಕಿ 11702 ಜನರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. 48154 ಜನರು ಗಂಭೀರ ಗಾಯಗೊಂಡಿರುತ್ತಾರೆ. ಒಟ್ಟಾರೆ ಅಪಘಾತಗಳ ಪೈಕಿ ದ್ವಿಚಕ್ರ ವಾಹನ ಸವಾರರ ಪಾಲು ಅತ್ಯಧಿಕವಿದ್ದು, 17933 ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿವೆ. ಮರಣ ಹೊಂದಿದವರ ಪೈಕಿ ಕರ್ನಾಟಕದಲ್ಲಿ 18-25 ವಯೋಮಾನದ 2267, 25-35 ವಯೋಮಾನದ 3,346 ಜನರು ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 518 ಅಪಘಾತ ಸಂಭವಿಸಿದ್ದು, 111 ಜನ ಮೃತಪಟ್ಟಿದ್ದು, 499 ಜನ ಗಾಯಗೊಂಡಿದ್ದಾರೆ. ಸಂಚಾರ ನಿಯಮ ಅರಿತು ವಾಹನ ಚಲಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರಸ್ತೆ ಸುರಕ್ಷತೆಯ ಕರಪತ್ರ ಹಾಗೂ ಸ್ಟಿಕರ್ ಬಿಡುಗಡೆ ಮಾಡಲಾಯಿತು.

ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ಶಿವಾನಂದ ಭಜಂತ್ರಿ, ಐಎಂಎ ಅಧ್ಯಕ್ಷ ಡಾ. ವೆಂಕಟೇಶ ಮೂಲಿಮನಿ, ಐಎಂಎ ಮಹಿಳಾ ವೈದ್ಯರ ಶಾಖೆಯ ಅಧ್ಯಕ್ಷೆ ಡಾ. ಭಾರತಿ ಭಾವಿಕಟ್ಟಿ, ಕಾರ್ಯದರ್ಶಿ ಡಾ. ಆನಂದ ವರ್ಮಾ, ಡಾ. ಆಶಾ ಪಾಟೀಲ, ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ ಸೇರಿದಂತೆ ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು. ಶ್ರೇಯಾ ಪ್ರಾರ್ಥಿಸಿದರು. ದಿನಾಮನಿ ಜಿ.ವಿ. ಸ್ವಾಗತಿಸಿದರು. ಅಶೋಕ ವಾಲ್ಮೀಕಿ ವಂದಿಸಿದರು.