ಅಕ್ಟೋಬರ್‌ ೧೨ರಂದು ಅದ್ಧೂರಿ ಮಂಡ್ಯ ದಸರಾ

| Published : Oct 11 2024, 11:46 PM IST

ಸಾರಾಂಶ

ಶ್ರೀಚಾಮುಂಡೇಶ್ವರಿ ದೇವಿ ಮೆರವಣಿಗೆಗೆ ಆಕರ್ಷಕ ಜಾನಪದ ಕಲಾತಂಡಗಳು ಸಾಥ್ ನೀಡಲಿವೆ. ನಾದಸ್ವರ, ಕೇರಳ ಚಂಡೆ, ಭದ್ರಕಾಳಿ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಚಿಲಿಪಿಲಿಗೊಂಬೆ, ನಾಗರಹೊಳೆ ಜೇನುಕುರುಬರ ಕುಣಿತ, ಬಂಡೂರು ಕುರಿ, ಶ್ರೀರಂಗಪಟ್ಟಣ ಡ್ರಮ್ಸ್, ತಮಟೆ, ನಗಾರಿ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಹತ್ತು ವರ್ಷಗಳಿಂದ ಮಂಡ್ಯ ಯೂತ್ ಗ್ರೂಪ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮಂಡ್ಯ ದಸರಾ ಸಾಂಸ್ಕೃತಿಕ ಉತ್ಸವ ವಿಜಯದಶಮಿ ದಿನವಾದ ಶನಿವಾರ (ಅ.೧೨)ದಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್ ಆನಂದ್ ಹೇಳಿದ್ದಾರೆ.

ಅಂದು ಮಧ್ಯಾಹ್ನ ೩.೧೫ರಿಂದ ೩.೫೦ರೊಳಗೆ ಸಲ್ಲುವ ಶ್ರವಣನಕ್ಷತ್ರ ಕುಂಭ ಲಗ್ನದಲ್ಲಿ ಶ್ರೀಕಾಳಿಕಾಂಬ ದೇವಾಲಯದ ಬಳಿಯ ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿರುವ ಬನ್ನಿಮರಕ್ಕೆ ಶಾಸಕ ಪಿ.ರವಿಕುಮಾರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವರು. ನಂತರ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಚಾಮುಂಡೇಶ್ವರಿ ವಿಗ್ರಹಕ್ಕೆ ಡಾ.ಅನಿಲ್ ಆನಂದ್ ಪೂಜೆ ನೆರವೇರಿಸಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಚಾಮುಂಡೇಶ್ವರಿ ದೇವಿ ಮೆರವಣಿಗೆಗೆ ಆಕರ್ಷಕ ಜಾನಪದ ಕಲಾತಂಡಗಳು ಸಾಥ್ ನೀಡಲಿವೆ. ನಾದಸ್ವರ, ಕೇರಳ ಚಂಡೆ, ಭದ್ರಕಾಳಿ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಚಿಲಿಪಿಲಿಗೊಂಬೆ, ನಾಗರಹೊಳೆ ಜೇನುಕುರುಬರ ಕುಣಿತ, ಸೋಮನ ಕುಣಿತ, ವೀರಮಕ್ಕಳ ಕುಣಿತ, ಬೆಂಕಿ ಭರಾಟೆ, ದೊಣ್ಣೆವರಸೆ, ಕೋಳಿಗೊಂಬೆ, ಹುಲಿವೇಷ, ಗೊರವರ ಕುಣಿತ, ಬಂಡೂರು ಕುರಿ, ಶ್ರೀರಂಗಪಟ್ಟಣ ಡ್ರಮ್ಸ್, ತಮಟೆ, ನಗಾರಿ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಮೆರವಣಿಗೆಯು ಶ್ರೀಕಾಳಿಕಾಂಬ ದೇವಾಲಯದ ಆವರಣದಿಂದ ಹೊರಟು ಎಸ್.ಡಿ.ಜಯರಾಂ ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಅಲ್ಲಿಂದ ಮಹಾವೀರ ವೃತ್ತ ತಲುಪಲಿದೆ. ನಂತರ ವಿ.ವಿ.ರಸ್ತೆ ಮಾರ್ಗವಾಗಿ ಹೊಸಹಳ್ಳಿ ವೃತ್ತಕ್ಕೆ ಆಗಮಿಸಲಿದೆ. ಬಳಿಕ ನೂರಡಿ ರಸ್ತೆ ಮಾರ್ಗವಾಗಿ ತೆರಳಿ ಬನ್ನೂರು ರಸ್ತೆ ಮೂಲಕ ಶ್ರೀಚಾಮುಂಡೇಶ್ವರಿ ದೇವಾಲಯದ ಬಳಿ ಮೆರವಣಿಗೆ ಅಂತ್ಯಗೊಳ್ಳಲಿದೆ ಎಂದಿದ್ದಾರೆ.

ಮಂಡ್ಯ ಯೂತ್ ಗ್ರೂಪ್ ಪದಾಧಿಕಾರಿಗಳು ಶ್ವೇತ ವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆರವಣಿಗೆಯುದ್ದಕ್ಕೂ ಜೊತೆಯಾಗಿ ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.