ಸಾರಾಂಶ
ಪಟ್ಟಣದಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು.
ಲಕ್ಷ್ಮೇಶ್ವರ: ಪಟ್ಟಣದಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು.
ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಹಾಗೂ ಆರಾಧನೆಯಲ್ಲಿ ಪಾಲ್ಗೊಳ್ಳಲು ಭಕ್ತ ಸಾಗರ ಹರಿದು ಬಂದ ದೃಶ್ಯ ಕಂಡು ಬಂದಿತು. ಸುಮಾರು ೩೦೫ ವರ್ಷಗಳ ಇತಿಹಾಸ ಹೊಂದಿರುವ ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಮಠದ ಆರಾಧನೆ ಕಾರ್ಯಕ್ರಮವು ಭಾನುವಾರ ಹಾಗೂ ಸೋಮವಾರ ಯಶಸ್ವಿಯಾಗಿ ನಡೆದವು. ಭಾನುವಾರ ರಾಯರ ಮಠದಲ್ಲಿ ಸಂಜೆ ಸಂಗೀತ ಕಾರ್ಯಕ್ರಮ ಸೇರಿದಂತೆ ಭಜನೆ, ಇತ್ಯಾದಿಗಳು ನೆರವೇರಿದವು. ಸೋಮವಾರ ಶ್ರೀಮಠದಲ್ಲಿ ರಾಘವೇಂದ್ರ ಸ್ತ್ರೋತ್ರ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪುರಾಣ, ಪಾರಾಯಣಗಳು ನಡೆದು ನಂತರ ಶ್ರೀ ರಾಯರ ಮೃತ್ತಿಕಾ ಬೃಂದಾವನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಈ ವೇಳೆ ಭಕ್ತರು ರಾಯರ ದರ್ಶನ ಪಡೆದು ಪುನೀತರಾದರು.ರಾಯರ ಮಠಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಯುವ ಮುಖಂಡ ಆನಂದ ಗಡ್ಡದೇವರಮಠ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿ ರಾಯರ ದರ್ಶನ ಆಶೀರ್ವಾದ ಪಡೆದುಕೊಂಡರು.ಆ. ೧೨ರಂದು ಬೆಳಗ್ಗೆ ೧೦ ಗಂಟೆಗೆ ರಥೋತ್ಸವ ಜರುಗಲಿದೆ. ನಂತರ ೧೨ ಗಂಟೆಗೆ ಶ್ರೀಮಠದಲ್ಲಿ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ನೆರವೇರಲಿವೆ ಎಂದು ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ತಿಳಿಸಿದ್ದಾರೆ.