ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ

| Published : Jan 27 2025, 12:46 AM IST

ಸಾರಾಂಶ

ಎಲ್ಲಾ ಜಾತಿ ಧರ್ಮದ ಜನರನ್ನು ಒಂದುಗೂಡಿಸಿ ಬೆಸೆಯುವಂತ ಸಾಂಸ್ಕೃತಿಕ ಕಾರ್ಯಕ್ರಮ,

ಕನ್ನಡಪ್ರಭ ವಾರ್ತೆ ನಂಜನಗೂಡು

ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಭಾನುವಾರ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಜನಸ್ತೋಮದ ನಡುವೆ ವೈಭವಯುತ, ವರ್ಣರಂಜಿತ ಚಾಲನೆ ದೊರೆಯಿತು.

ಮನರಂಜನೆಯ ಜೊತೆಯಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಜಾತ್ರೆಯ ಭಾಗವಾಗಿ ಇರುವುದರಿಂದ ಸುತ್ತೂರು ಜಾತ್ರೆ ಜನರಲ್ಲಿ ಅರಿವು ಮೂಡಿಸುವ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಜಾತ್ರಾ ಮಹೋತ್ಸವದ ಮೂಲಕ ಕೃಷಿಯಲ್ಲಿ ಆಗಿರುವ ಆಧುನಿಕ ತಂತ್ರಜ್ಞಾನ, ನೂತನ ಯಂತ್ರೋಪಕರಣಗಳ ಪರಿಚಯ, ನೂತನ ಕೃಷಿ ಪದ್ಧತಿಯ ಅನುಸರಣೆ, ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳು, ಹೊಸ ಸಂಶೋಧನೆಗಳ ಮಾಹಿತಿಯನ್ನು ವಸ್ತು ಪ್ರದರ್ಶನದ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುವುದು ಈ ಜಾತ್ರೆಯ ವಿಶೇಷತೆ.

ಎಲ್ಲಾ ಜಾತಿ ಧರ್ಮದ ಜನರನ್ನು ಒಂದುಗೂಡಿಸಿ ಬೆಸೆಯುವಂತ ಸಾಂಸ್ಕೃತಿಕ ಕಾರ್ಯಕ್ರಮ, ದೇಸಿ ಕ್ರೀಡೆ, ಕುಸ್ತಿ ಮತ್ತು ಭಜನೆ, ನಾಟಕ, ಜಾನಪದ, ಸೋಬಾನೆ, ದೇಸಿ ಆಟಗಳು, ಜಾನುವಾರು ಪರಿಷೆ, ದೇಶಿ ತಳಿಗಳ ಉತ್ತೇಜನ, ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಚಟುವಟಿಕೆಗಳು ಜಾತ್ರೆಯ ಭಾಗವಾಗಿ ಬೆಸೆದುಕೊಂಡಿರುವುದರಿಂದ ಸುತ್ತೂರು ಜಾತ್ರೆ ಜನಜಾಗೃತಿಯ ಜಾತ್ರೆ ಎಂಬುದನ್ನು ಸಾಕ್ಷೀಕರಿಸಲಿದೆ.

ಈ ಬಾರಿಯೂ ಕೂಡ ಸೋಮವಾರ ಸರಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. 28 ರಂದು ರಥೋತ್ಸವ ಜರಗಲಿದೆ. ಅಂದು ಸಂಜೆ 6 ಗಂಟೆಗೆ ವೀರಭದ್ರೇಶ್ವರ ಕೊಂಡೋತ್ಸವ ಜರುಗಲಿದೆ. ಜ. 30 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಕುಸ್ತಿ ನಡೆಯಲಿದ್ದು, ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವದಲ್ಲಿ ಮೊದಲಿಗೆ 76ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಧ್ವಜಾರೋಹಣ ನೆರವೇರಿಸಿದರು.

ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರೆಯ ಭಾಗವಾದ ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು.

ಕಾರ್ಯಕ್ರಮದಲ್ಲಿ ಆಲಗೂರು ಬಬಲೇಶ್ವರ ಪಂಚಮಸಾಲಿ ಜಗದ್ಗುರು ಪೀಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಸ್ತು ಪ್ರದರ್ಶನವನ್ನು ಕೇಂದ್ರ ಕಾರ್ಮಿಕ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು, ಕೃಷಿ ಮೇಳವನ್ನು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಉದ್ಘಾಟಿಸಿದರು. ಸಾಂಸ್ಕೃತಿಕ ಮೇಳವನ್ನು ನಗಾರಿ ಬಾರಿಸುವ ಮೂಲಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಉದ್ಘಾಟಿಸಿದರು.

ಆರೋಗ್ಯ ತಪಾಸಣಾ ಶಿಬಿರವನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಉದ್ಘಾಟಿಸಿದರು. ದೋಣಿ ವಿಹಾರ ಕಾರ್ಯಕ್ರಮವನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಶಾಸಕ ದಿನೇಶ್ ಗೂಳಿಗೌಡ, ಅರುಣ್ ಶಹಪುರ, ಮಾಜಿ ಶಾಸಕರಾದ ನಾಗೇಂದ್ರ, ನಿರಂಜನ್ ಕುಮಾರ್, ಮೈಮುಲ್ ನಿರ್ದೇಶಕ ಓಂ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಗದ್ದಿಗೆ ಆವರಣದಲ್ಲಿ ಬೆಳಗ್ಗೆ ನಾದಸ್ವರ, ವಚನ ಗಾಯನ, ಭಕ್ತಿಗೀತೆ, ಮೈಸೂರಿನ ರೇವತಿ ಶರ್ಮ ತಂಡ ನಡೆಸಿಕೊಟ್ಟ ಸುಗಮ ಸಂಗೀತ, ನಾಗಸ್ವರ ನಾದಲಹರಿ, ಕುಶಾಲನಗರದ ಕುಂದನ ನೃತ್ಯಾಲಯ, ನಂಜನಗೂಡಿನ ನಾಗಸೀತಂಡ ನಡೆಸಿಕೊಟ್ಟ ಭರತನಾಟ್ಯ, ಭಾರತೀಯ ನೃತ್ಯ ಸಂಗೀತ ಅಕಾಡೆಮಿಯ ಶಿವಭರಣ ನೃತ್ಯ, ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜೀವನ ಆಧಾರಿತ ಕಥಾನಕವನ್ನು ಒಳಗೊಂಡ ಕಾರ್ಯಕರ್ತ ತಪಸ್ವಿ ನೃತ್ಯ ನಾಟ್ಯ ಸಂಗಮ, ನಂಜನಗೂಡಿನ ಬಸವೇಶ್ವರ ಕಲಾತಂಡ ನಡೆಸಿಕೊಟ್ಟ ತ್ರಿಜನ್ಮ ಮೋಕ್ಷ ನಾಟಕ, ಶ್ರೀ ಕೃಷ್ಣ ಗಾರಡಿ ನಾಟಕ, ವೀರ ಅಭಿಮನ್ಯು ನಾಟಕ, ಸತ್ಯ ಮಾಂಧಾತಾ ಅಥವಾ ಶ್ರೀ ಲಕ್ಷ್ಮಿ ಶನಿದೇವರ ಶಪಥ ನಾಟಕಗಳು ಪ್ರೇಕ್ಷಕರಿಗೆ ಮುದ ನೀಡಿದ್ದಲ್ಲದೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಳಿಸಿ ಮನಸೂರೆಗೊಂಡವು.

ಇದಕ್ಕೂ ಮುನ್ನ ಕರ್ತೃ ಗದ್ದಿಗೆ ಆವರಣದಲ್ಲಿ ಬೆಳಗ್ಗೆ 4 ಗಂಟೆಗೆ ಮಹಾಸಂಕಲ್ಪ ಪೂರ್ವಕ ಮಹಾರುದ್ರಾಭಿಷೇಕ, ಬೆಳಗ್ಗೆ 6.30ಕ್ಕೆ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿ. ಮರಳ್ಳಿ ಗ್ರಾಮದಲ್ಲಿ ಸ್ನೇಹ ಸೌಹಾರ್ದ ಶಾಂತಿ ಪ್ರಾರ್ಥನಾ ಪಥಸಂಚಲನ ನಡೆಯಿತು. ನಂತರ ಬೆಳಗ್ಗೆ 7.30ಕ್ಕೆ ಮಾಗಡಿಯ ಜಡೇದೇವರ ಮಠ ಹಾಗೂ ಹೊನ್ನುಡಿಕೆ ಗದ್ದಿಗೆ ಶ್ರೀ ಇಮ್ಮಡಿ ಬಸವರಾಜ ಸ್ವಾಮಿಜೀಗಳು ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು.

ಹಾಸನ ಜಿಲ್ಲೆಯ ಯಸಳೂರು ಗ್ರಾಮದ ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಂದೇಶ ನೀಡಿದರು.

ಬಳಿಕ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅಭಿಷೇಕ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮಧ್ಯಾಹ್ನ 3ಕ್ಕೆ ಕಪಿಲಾ ನದಿಯಿಂದ ಹಸು- ಕರುವಿನೊಂದಿಗೆ ಆಗ್ರೋದಕವನ್ನು ತಂದು ಕಳಸ ಪ್ರತಿಷ್ಠಾಪಿಸಲಾಯಿತು. ನಂತರ ಮೂಲಮಠದಿಂದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಮೂಲ ಶ್ರೀಮಠದಿಂದ ಕರ್ತೃ ಗದ್ದುಗೆವರೆಗೆ, ನಾದಸ್ವರ, ಛತ್ರಿ ಚಾಮರ, ಬಿರುದು ಬಾವಲಿಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ಮೂಲಕ ಕರೆತರಲಾಯಿತು.

ನಂತರ ಶಿವಗದ್ದುಗೆಯಲ್ಲಿ ಉತ್ಸವ ಮೂರ್ತಿಯನ್ನು ಮೂರು ಪ್ರದಕ್ಷಣೆ ಹಾಕಿಸಿದ ನಂತರ ಕರ್ತೃಗದ್ದುಗೆಯಲ್ಲಿ ಬಿಜಂಗಯ್ಯಲಾಯಿತು. ಮೆರವಣಿಗೆಯಲ್ಲಿ. ವೀರಭದ್ರ ಕುಣಿತ, ಸ್ಯಾಕ್ಸೋಫೋನ್, ಗಾರಡಿ ಬೊಂಬೆ, ಕುಂಭು ಕಹಳೆ, ತಮಟೆ, ನಗಾರಿ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.