ಕನ್ನಡಪ್ರಭ ವಾರ್ತೆ ಅರಸೀಕೆರೆ

ಆದಿ ಶಂಕರಾಚಾರ್ಯರ ಜಯಂತಿಯನ್ನು ತಾಲೂಕು ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಸನಾತನ ಧರ್ಮದ ಮೌಲ್ಯಗಳು ಹಾಗೂ ದಾರ್ಶನಿಕ ಪರಂಪರೆಯ ಮಹತ್ವವನ್ನು ವಿವಿಧ ವಕ್ತಾರರು ಒತ್ತಿ ಹೇಳಿದರು.

ನಗರದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಬ್ರಾಹ್ಮಣ ಸಂಘ ಮತ್ತು ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ. ಎಂ. ಶಿವಲಿಂಗೇಗೌಡ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮದಲ್ಲಿ ಅಸ್ಥಿರತೆ ಉಂಟಾದ ಕಾಲದಲ್ಲಿ ಆದಿ ಶಂಕರಾಚಾರ್ಯರು ಅವತರಿಸಿ ದೇಶದಾದ್ಯಂತ ಸಂಚರಿಸಿ ಧರ್ಮ ಜಾಗೃತಿ ಮೂಡಿಸಿದರು. ಅದ್ವೈತ ತತ್ವವನ್ನು ಪ್ರತಿಪಾದಿಸಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸುವ ಮೂಲಕ ಸನಾತನ ಧರ್ಮದ ಏಕತೆ ಮತ್ತು ಸ್ಥಿರತೆಯನ್ನು ಬಲಪಡಿಸಿದರು ಎಂದರು.ದಕ್ಷಿಣದ ಶೃಂಗೇರಿ ಶಾರದಾ ಪೀಠ, ಪೂರ್ವದ ಪುರಿ ಗೋವರ್ಧನ ಪೀಠ, ಪಶ್ಚಿಮದ ದ್ವಾರಕಾ ಕಾಳಿಕಾ ಪೀಠ ಮತ್ತು ಉತ್ತರದ ಜ್ಯೋತಿರ್ಮಠಗಳ ಸ್ಥಾಪನೆ ದೇಶದ ಆಧ್ಯಾತ್ಮಿಕ ಏಕತೆಗೆ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಶೃಂಗೇರಿ ಪೀಠ ನಮ್ಮ ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಶಂಕರಾಚಾರ್ಯರು ದೈವಾಂಶದಿಂದ ಅವತರಿಸಿದ ಮಹಾನ್ ತತ್ವಜ್ಞಾನಿ. ಅವರ ನಂತರ ಶ್ರೀ ಮಧ್ವಾಚಾರ್ಯರಂತಹ ದಾರ್ಶನಿಕರು ಸನಾತನ ಧರ್ಮವನ್ನು ಮತ್ತಷ್ಟು ಬಲಪಡಿಸಿದರು. ರಾಜ್ಯ ಸರ್ಕಾರವು ದಾರ್ಶನಿಕರ ಜಯಂತಿಗಳನ್ನು ತಾಲೂಕು ಮಟ್ಟದಲ್ಲಿ ಆಚರಿಸುವ ಮೂಲಕ ಯುವಪೀಳಿಗೆಗೆ ಅವರ ವಿಚಾರಧಾರೆಗಳನ್ನು ಪರಿಚಯಿಸುತ್ತಿದೆ ಎಂದರು.ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್‌ ಮಾತನಾಡಿ, ಆದಿ ಶಂಕರಾಚಾರ್ಯರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿರದೇ ಇಡೀ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹರ್ಷಿಗಳು. ಅವರ ತತ್ವಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಧಾರ್ಮಿಕ ಜಾಗೃತಿಗೆ ದಾರಿ ತೋರಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಂ.ಜೆ. ಸಂತೋಷ್ ಕುಮಾರ್‌, ಕೆಎಂಎಫ್ ಗೋಪಿ, ಶಿರಸ್ತೆದಾರ್ ಶಿವಶಂಕರ್, ಕಾರ್ಯಕ್ರಮ ಸಂಯೋಜಕ ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.ಇದೇ ವೇಳೆ ನಗರದ ವಾಚನಾಲಯ ರಸ್ತೆಯ ಶ್ರೀ ಭವಾನಿ ಶಂಕರೇಶ್ವರ ದೇವಸ್ಥಾನದಲ್ಲಿ ಆದಿ ಶಂಕರಾಚಾರ್ಯ ಹಾಗೂ ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.